ಮಾನವ-ಪ್ರಾಣಿ ಸಂಘರ್ಷ; ತಮಿಳುನಾಡು ಅನುಸರಿಸುತ್ತಿರುವ ವಿಧಾನಗಳ ಬಗ್ಗೆ ಅಧ್ಯಯನ ಮಾಡುವಂತೆ ಅರಣ್ಯ ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ
ಬೆಂಗಳೂರು: ಮಾನವ-ಪ್ರಾಣಿ ಸಂಘರ್ಷಗಳನ್ನು ನಿಯಂತ್ರಿಸುವಲ್ಲಿ ತಮಿಳುನಾಡು ಅನುಸರಿಸುತ್ತಿರುವ ವಿಧಾನಗಳ ಪರಿಣಾಮಕಾರಿತ್ವದ ಕುರಿತು ಅಧ್ಯಯನ ಮಾಡುವಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ಗುರುವಾರ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕದಲ್ಲಿ ಆನೆಗಳ ಸಂಖ್ಯೆ ಕೇವಲ 5,395 ರಷ್ಟಿದೆ. ಜೀವ ಮತ್ತು ಬೆಳೆ ಹಾನಿಯನ್ನು ತಡೆಯಲು ಪರ್ಯಾಯ ಯೋಜನೆಯನ್ನು ರೂಪಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಕೊಡಗು, ಹಾಸನ, ಸಕಲೇಶಪುರ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಮಾನವ-ಪ್ರಾಣಿ ಸಂಘರ್ಷದಿಂದ ಹೆಚ್ಚು ಹಾನಿಯಾಗುತ್ತಿದೆ.
ಪ್ರಸ್ತುತ ಕರ್ನಾಟಕವು ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಿರುವ ಹಳ್ಳಿಗಳಿಗೆ ಆನೆಗಳು ನುಗ್ಗದಂತೆ ತಡೆಯಲು ರೈಲ್ವೆ ಹಳಿಗಳನ್ನು ಬಳಸಿ ಬ್ಯಾರಿಕೇಡ್ ನಿರ್ಮಿಸಲು ಪ್ರತಿ ಕಿಲೋಮೀಟರ್‌ಗೆ 1.5 ಕೋಟಿ ರೂ. ವೆಚ್ಚವಾಗುತ್ತಿದ್ದು, ಕರ್ನಾಟಕವು ಇದುವರೆಗೆ 312 ಕಿ.ಮೀ. ಬ್ಯಾರಿಕೇಡ್ ನಿರ್ಮಿಸಿದೆ.
ಆದರೆ ತಮಿಳುನಾಡು ಪ್ರತಿ ಕಿಲೋಮೀಟರ್‌ಗೆ ಕೇವಲ 45 ಲಕ್ಷ ರೂಪಾಯಿ ವೆಚ್ಚದಲ್ಲಿ ಉಕ್ಕಿನ ಹಗ್ಗಗಳನ್ನು ಬಳಸುತ್ತಿದೆ. ಸ್ಟೀಲ್ ಹಗ್ಗಗಳು ಆನೆಗಳು ಮತ್ತು ಇತರ ಕಾಡು ಪ್ರಾಣಿಗಳ ಅತಿಕ್ರಮಣವನ್ನು ತಡೆದುಕೊಳ್ಳುತ್ತದೆಯೇ ಎಂಬುದನ್ನು ನಾವು ನೋಡಬೇಕು. ಈ ಬಗ್ಗೆ ಪರಿಶೀಲಿಸಿ 10 ದಿನದೊಳಗೆ ವರದಿ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈಲ್ವೆ ಹಳಿ ಬಳಸಿದ ಬೇಲಿಗಳನ್ನು ಅಳವಡಿಸುವ ಮೊದಲು ಮತ್ತು ನಂತರದ ಜೀವಹಾನಿ ಮತ್ತು ಬೆಳೆ ಹಾನಿಯ ಬಗ್ಗೆ ತುಲನಾತ್ಮಕ ವರದಿಯನ್ನು ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಆದೇಶಿಸಿದರು.
ಈ ಸಂಬಂಧ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೂ ಸೂಚನೆ ರವಾನಿಸಲಾಗಿದೆ ಎಂದು ಸಚಿವ ಖಂಡ್ರೆ ಅವರ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.