ಸೇಡಂನಲ್ಲಿ ನಡೆಯುವ 'ಭಾರತೀಯ ಸಂಸ್ಕೃತಿ ಉತ್ಸವ–7'ರಲ್ಲಿ ಭಾಗವಹಿಸದಿರಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ
ಬೆಂಗಳೂರು: ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಮುಂದಿನ ವರ್ಷ ಜನವರಿ 29ರಿಂದ ಫೆಬ್ರವರಿ 6ರವರೆಗೆ ನಡೆಯಲಿರುವ 'ಭಾರತೀಯ ಸಂಸ್ಕೃತಿ ಉತ್ಸವ–7'ರಲ್ಲಿ ಭಾಗವಹಿಸದಿರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದಾರೆ.
ಈ ಕುರಿತು ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಭಾರತ ವಿಕಾಸ ಸಂಗಮ ಸಂಸ್ಥೆಯವರು ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವ ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಣವಾಗಿರುವದನ್ನು ಗಮನಿಸಿದ್ದೇನೆ. ಈ ಬಗ್ಗೆ ನನಗೆ ಅಧಿಕೃತ ಆಹ್ವಾನ ಬಂದಿಲ್ಲ.
ಆದರೆ ಈ ಕಾರ್ಯಕ್ರಮವನ್ನು ಆಯೋಜಿಸಿರುವ ಸಂಸ್ಥೆಯ ಹಿನ್ನೆಲೆಯ ವಿವರವನ್ನು ತರಿಸಿ ಪರಿಶೀಲಿಸಿದ ನಂತರ ಅದರಲ್ಲಿ ಭಾಗವಹಿಸದೆ ಇರಲು ತೀರ್ಮಾನಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕಾರ್ಯಕ್ರಮ ಆಯೋಜಿಸಿದ ಭಾರತ್ ವಿಕಾಸ್ ಸಂಗಮ್, RSSನ ಕೆ.ಎನ್. ಗೋವಿಂದಾಚಾರ್ಯ ಅವರೊಂದಿಗೆ ನಂಟು ಹೊಂದಿದ್ದು, ಭಾರತೀಯ ಸಂಸ್ಕೃತಿ ಸಂರಕ್ಷಣೆಯ ನೆಪದಲ್ಲಿ ಹಿಂದುತ್ವ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಲೇಖಕ ಮತ್ತು ಸಾಮಾಜಿಕ ಹೋರಾಟಗಾರ ಶಿವಸುಂದರ್ ಸೇರಿದಂತೆ ಕೆಲವು ಹೋರಾಟಗಾರರು, ಭಾರತೀಯ ಸಂಸ್ಕೃತಿಯೊಂದಿಗೆ ಸಮೀಕರಿಸುವ ವಿಶೇಷ ಹಿಂದೂ ಬ್ರಾಹ್ಮಣ ಸಂಸ್ಕೃತಿಯನ್ನು ಉತ್ತೇಜಿಸುವ ವೇದಿಕೆ ಇದು ಟೀಕಿಸಿದ್ದರು.