ಬುಲ್ ಟ್ರಾಲ್, ಲೈಟ್ ಫಿಶಿಂಗ್ ಮೀನುಗಾರಿಕೆ ನಿಷೇಧಿಸುವಂತೆ ಆಗ್ರಹಿಸಿ ನಾಡದೋಣಿ ಮೀನುಗಾರರಿಂದ ಧರಣಿ

ಬುಲ್ ಟ್ರಾಲ್, ಲೈಟ್ ಫಿಶಿಂಗ್ ಮೀನುಗಾರಿಕೆ ನಿಷೇಧಿಸುವಂತೆ ಆಗ್ರಹಿಸಿ ನಾಡದೋಣಿ ಮೀನುಗಾರರಿಂದ ಧರಣಿ

ಉಡುಪಿ: ಬುಲ್ ಟ್ರಾಲ್ ಮತ್ತು ಅವೈಜ್ಞಾನಿಕ ಬೆಳಕು ಮೀನುಗಾರಿಕೆ (ಲೈಟ್ ಫಿಶಿಂಗ್) ನಿಷೇಧ ಹಾಗೂ ಸೀಮೆಎಣ್ಣೆ ದರ ಕಡಿಮೆ ಮಾಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ನಾಡದೋಣಿ ಮೀನುಗಾರರು ಶುಕ್ರವಾರ ಬೈಂದೂರು ತಾಲೂಕಿನ ತ್ರಾಸಿ ಕಡಲ ಕಿನಾರೆಯಲ್ಲಿ ಧರಣಿ ನಡೆಸಿದರು.
ಉಡುಪಿ, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಗಳ ನಾಡದೋಣಿ ಮೀನುಗಾರರು ತ್ರಾಸಿ ಸಮುದ್ರದಲ್ಲಿ ನೂರಾರು ನಾಡದೋಣಿಗಳನ್ನು ಲಂಗರು ಹಾಕಿ ಪ್ರತಿಭಟಿಸಿದರು.
ಲೈಟ್ ಫಿಶಿಂಗ್ ಹಾಗೂ ನಿಷೇಧವಾಗಿರುವ ಬಲೆಗಳನ್ನು ಬಳಸಿ ಮಾಡುವ ಬುಲ್ ಟ್ರಾಲ್ ಮೀನುಗಾರಿಕೆಯಿಂದ ಮೀನಿನ ಸಂತತಿ ನಾಶವಾಗಿದೆ. ಇದರಿಂದ ಬಡ ಮೀನುಗಾರರು ಬದುಕು ನಡೆಸುವುದೇ ದುಸ್ತರವಾಗಿದೆ. ಹೀಗಾಗಿ ಈ ಅವೈಜ್ಞಾನಿಕ ಮೀನುಗಾರಿಕೆಯನ್ನು ಸರಕಾರ ಹತ್ತು ದಿನಗಳೊಳಗೆ ಸಂಪೂರ್ಣವಾಗಿ ನಿಷೇಧ ಹೇರಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬೀದಿಗಳಿದು ಹೋರಾಟ ನಡೆಸುತ್ತೇವೆ ಎಂದು ಧರಣಿ ನಿರತ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ನಾಗೇಶ್ ಖಾರ್ವಿ ಮಾತನಾಡಿ, ಅವೈಜ್ಞಾನಿಕ ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲ್ ಮೀನುಗಾರಿಕೆಯಿಂದ ಬಡ ನಾಡದೋಣಿ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಅವೈಜ್ಞಾನಿಕ ಮೀನುಗಾರಿಕೆ ಬಡ ಮೀನುಗಾರರ ಕಸುಬನ್ನು ಕಸಿದುಕೊಳ್ಳುತ್ತಿದೆ. ಈ ಕುರಿತು ಮೀನುಗಾರಿಕೆ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಸರಕಾರ ಇನ್ನಾದರೂ ಹೆಚ್ಚೆತ್ತುಕೊಳ್ಳದಿದ್ದರೆ ಲಕ್ಷಾಂತರ ಮಂದಿ ಮೀನುಗಾರರು ರಾಜ್ಯಾದ್ಯಂತ ಬೀದಿಗಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಧರಣಿ ಬಳಿಕ ಏಕಾಏಕಿಯಾಗಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಇಳಿದ ಸಾವಿರಾರು ನಾಡದೋಣಿ ಮೀನುಗಾರರು, ಕೆಲಹೊತ್ತು ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದರು. ಪೊಲೀಸರು ಮೀನುಗಾರರ ಮನವೊಲಿಸಿ ಹೆದ್ದಾರಿ ತೆರವುಗೊಳಿಸಿದರು. 
ಪ್ರತಿಭಟನೆ ಹಿನ್ನೆಲೆಯಲ್ಲಿ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ನೇತೃತ್ವದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸವೀತ್ರ ತೇಜ್, ಉಪವಿಭಾಗದ ಪೊಲೀಸ್ ನಿರೀಕ್ಷಕರು, ಉಪ ನಿರೀಕ್ಷಕರ ನೇತೃತ್ವದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. 

ಪ್ರತಿಭಟನೆಯಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಗೋಪಾಲ ಪೂಜಾರಿ ಹಾಗೂ ಉಡುಪಿ, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಾವಿರಾರು ನಾಡದೋಣಿ ಮೀನುಗಾರರು ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article