![‘ದ್ವಮ್ದ್ವ' ಕನ್ನಡ ಕಲಾತ್ಮಕ ಚಿತ್ರ ಬಿಡುಗಡೆ; ಪತ್ರಕರ್ತರಿಗೆ ವಿಶೇಷ ಪ್ರದರ್ಶನ ‘ದ್ವಮ್ದ್ವ' ಕನ್ನಡ ಕಲಾತ್ಮಕ ಚಿತ್ರ ಬಿಡುಗಡೆ; ಪತ್ರಕರ್ತರಿಗೆ ವಿಶೇಷ ಪ್ರದರ್ಶನ](https://blogger.googleusercontent.com/img/b/R29vZ2xl/AVvXsEh6jTHMw_vD7QS7HL8UFHBhSYX8cJe4mlT94bSYsleEkuRwSjKdp6v2QbhDmpXsYuldWGv2d9TDhfmjM2tP-TdMc8bUE7nL3Bp4k9XFRGADQmSVQv8j-JxFFNm37-z8ZFo3NVejMK8Msyhe4aQGzP9tNv2zg2PFAP8JrQhQXq8UkUJbj11kJGzlUF90RBWO/w640-h480/3.jpg)
‘ದ್ವಮ್ದ್ವ' ಕನ್ನಡ ಕಲಾತ್ಮಕ ಚಿತ್ರ ಬಿಡುಗಡೆ; ಪತ್ರಕರ್ತರಿಗೆ ವಿಶೇಷ ಪ್ರದರ್ಶನ
ಉಡುಪಿ: ಯಕ್ಷಗಾನದಲ್ಲಿನ ಹೆಣ್ಣಿನ ಪಾತ್ರಕ್ಕೆ ಸಂಬಂಧಿಸಿದ ಕಥಾ ಹಂದರ ಹೊಂದಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾನ್ಯತೆ ಹಾಗೂ ಪ್ರದರ್ಶನ ಕಂಡಿರುವ ‘ದ್ವಮ್ದ್ವ' ಕನ್ನಡ ಕಲಾತ್ಮಕ ಚಲನಚಿತ್ರ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಹಾಗೂ ಪತ್ರಕರ್ತರಿಗೆ ವಿಶೇಷ ಪ್ರದರ್ಶನವನ್ನು ಶುಕ್ರವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿತ್ತು.
ಬೆಂಕಿ ಬ್ಯಾಚ್‌ಮೇಟ್ಸ್ ಪ್ರೊಡಕ್ಷನ್ ಮತ್ತು ಕೋಣನೂರು ಪ್ರೊಡಕ್ಷನ್ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಸಿನೆಮಾ ನಿರ್ದೇಶಕ ಪೃಥ್ವಿ ಕೋಣನೂರು ‘ದ್ವಮ್ದ್ವ' ಚಲನಚಿತ್ರವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳಿಸಿದರು. ಮಣಿಪಾಲ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ನ ಮುಖ್ಯಸ್ಥ ಪ್ರೊ.ವರದೇಶ ಹಿರೇಗಂಗೆ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
‘ದ್ವಮ್ದ್ವ' ಚಲನಚಿತ್ರದ ನಿರ್ದೇಶಕ ಕ್ಲಿಂಗ್ ಜಾನ್ಸನ್ ಮಾತನಾಡಿ, ಈ ಸಿನೆಮಾ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕನ್ನಡ ಮೊದಲ ಕ್ವೀರ್ ಚಲನಚಿತ್ರವಾಗಿದೆ. ಇಂದು ಕರಾವಳಿ ಪಟ್ಟಣವಾದ ಉಡುಪಿಯಲ್ಲಿ ವಾಸಿಸುವ ಚುಕ್ಕಿಯ ಜೀವನದ ಸುತ್ತ ಸುತ್ತತ್ತದೆ. ಅವರು ವಿಶಿಷ್ಟವಾದ ಸಂಪ್ರದಾಯಿಕ ಕಲೆಯಾದ ಯಕ್ಷಗಾನದಲ್ಲಿ ಸ್ತ್ರೀಪಾತ್ರವನ್ನು ನಿರ್ವಹಿಸುತ್ತಿರು ತ್ತಾರೆ. ಈ ಚಿತ್ರ ಚುಕ್ಕಿಯ ಜೀವದ ಹೋರಾಟಗಳ, ಸೂಕ್ಷ್ಮವಾದ ವಿಚಾರವನ್ನು ಬಿಂಬಿಸುತ್ತದೆ ಎಂದರು.
ಈ ಸಿನೆಮಾ ಕೋಣನೂರು ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯ ಇದ್ದು, ಎಲ್ಲರೂ ವೀಕ್ಷಣೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಸಿನೆಮಾ ವೀಕ್ಷಣೆಯ ಬಳಿಕ ನಿರ್ದೇಶಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ನಟರಾದ ಭಾಸ್ಕರ್ ಮಣಿಪಾಲ, ಪ್ರಭಾಕರ ಕುಂದರ್, ಬೆನ್ಸು ಪೀಟರ್, ರಾಜೇಂದ್ರ ನಾಯಕ್, ಭಾರತಿ ಟಿ.ಕೆ., ಸಂದೀಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.