ದೇಶವನ್ನೇ ಬೆಚ್ಚಿ ಬೀಳಿಸಿದ್ದ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ; ಆರೋಪಿ ಸಂಜಯ್‌ ರಾಯ್‌ ದೋಷಿ

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ; ಆರೋಪಿ ಸಂಜಯ್‌ ರಾಯ್‌ ದೋಷಿ

ಕೋಲ್ಕತ್ತಾ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಆರ್ ಜಿ ಕರ್ ಮೆಡಿಕಲ್‌ ಕಾಲೇಜು ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಸಂಜಯ್‌ ರಾಯ್‌ನನ್ನು ದೋಷಿ ಎಂದು ಕೋರ್ಟ್‌ ತೀರ್ಪು ಪ್ರಕಟಿಸಿದೆ.

ಕೋಲ್ಕತ್ತಾ ಸೆಸೆನ್ಸ್ ಕೋರ್ಟ್ ನ್ಯಾಯಾಧೀಶ ಅನಿರ್ಬನ್ ದಾಸ್ ಇಂದು ತೀರ್ಪು ಪ್ರಕಟಿಸಿದರು. ಕೋರ್ಟ್‌ ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ವಿಚಾರಣೆ ನಡೆಸಿದ 57 ದಿನಗಳಲ್ಲಿ ಕೋರ್ಟ್‌ ತೀರ್ಪು ಪ್ರಕಟಿಸಿದೆ.

ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ದೇಶವ್ಯಾಪಿ ಪ್ರತಿಭಟನೆ ನಡೆದಿತ್ತು. ಕೊನೆಗೆ ಈ ಪ್ರಕರಣದ ತನಿಖೆಯನ್ನು ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ಸಿಬಿಐ ತನಿಖೆಗೆ ಒಪ್ಪಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅತ್ಯಾಚಾರ ನಡೆದಿದ್ದು ದೃಢ ಎಂದು ಚಾರ್ಜ್‌ಶೀಟ್‌ ಸಲ್ಲಿಸಿತ್ತು.

ಕೋಲ್ಕತ್ತಾ ಪ್ರಕರಣ ಏನು?

ಕಳೆದ ಆ.9ರಂದು ಬೆಳಗ್ಗೆ ಸ್ನಾತಕೋತ್ತರ ತರಬೇತಿ ನಿರತ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಕೃತ್ಯ ನಡೆಸಿದ್ದ ಆರೋಪಿ ಸಂಜಯ್‌ನನ್ನು ಪೊಲೀಸರು ಬಂಧಿಸಿದ್ದರು. ಅಶ್ಲೀಲ ವೀಡಿಯೋಗಳಿಗೆ ವ್ಯಸನಿಯಾಗಿದ್ದ ಸಂಜಯ್ ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ರಕ್ತಸಿಕ್ತ ಬಟ್ಟೆಯನ್ನು ತೊಳೆದಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಹಿಂದೆ ಪೊಲೀಸ್ ಸ್ವಯಂ ಸೇವಕನಾಗಿದ್ದ ಈತ 4 ಬಾರಿ ಮದುವೆಯಾಗಿದ್ದು, ಪತ್ನಿಯರಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು.

Ads on article

Advertise in articles 1

advertising articles 2

Advertise under the article