
ಮಗನಿಗೆ ಗುರಿಯಿಟ್ಟ ಕೋವಿಗೆ ಪತ್ನಿ ಬಲಿ; ಕೃತ್ಯಕ್ಕೆ ಮನನೊಂದು ಆರೋಪಿ ಪತಿಯೂ ವಿಷ ಸೇವಿಸಿ ಆತ್ಮಹತ್ಯೆ!
ಮಂಗಳೂರು: ಮಗನಿಗೆ ಗುರಿಯಿಟ್ಟ ಕೋವಿಗೆ ಪತ್ನಿ ಬಲಿಯಾಗಿರುವ ಘಟನೆ ಸುಳ್ಯದ ನೆಲ್ಲೂರು ಕೆಮ್ರಾಜೆ ಎಂಬಲ್ಲಿ ನಡೆದಿದೆ. ತನ್ನಿಂದಾದ ಕೃತ್ಯಕ್ಕೆ ಮನನೊಂದು ಆರೋಪಿ ಪತಿಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ತಡರಾತ್ರಿ ಘಟನೆ ನಡೆದಿದೆ. ಕೊಲೆಗೀಡಾದ ಪತ್ನಿ ವಿನೋದಾ (42). ಆತ್ಮಹತ್ಯೆ ಮಾಡಿಕೊಂಡ ಪತಿ ರಾಮಚಂದ್ರ ಗೌಡ (52).
ಆರೋಪಿ ರಾಮಚಂದ್ರ ಪ್ರತಿದಿನವೂ ಕುಡಿದು ಬಂದು ಪತ್ನಿ ವಿನೋದಾ ಜೊತೆ ಜಗಳವಾಡುತ್ತಿದ್ದ. ನಿನ್ನೆ ಮತ್ತೆ ಗಲಾಟೆ ಆರಂಭವಾದಾಗ ಮಗ ಪ್ರಶಾಂತ್ ಗಲಾಟೆ ತಡೆಯಲು ಮುಂದಾಗಿದ್ದ. ಈ ಸಂದರ್ಭದಲ್ಲಿ ಪ್ರಶಾಂತ್‌ಗೆ ಕೋವಿಯನ್ನು ಗುರಿಯಾಗಿಸಿದ ಸಂದರ್ಭದಲ್ಲಿ ಪತ್ನಿ ವಿನೋದಾ ಅಡ್ಡ ಬಂದಿದ್ದಾರೆ. ವಿನೋದಾ ಎದೆಗೆ ಗುಂಡು ತಾಗಿದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದರಿಂದ ಮನನೊಂದ ಆರೋಪಿ ಪತಿ ರಾಮಚಂದ್ರ ಗೌಡ ರಬ್ಬರ್‌ಗೆ ಬಳಸೋ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಡಿದು ಗಲಾಟೆ ಹಿನ್ನೆಲೆಯಲ್ಲಿ ಸ್ಥಳೀಯರು ಕೋವಿಯನ್ನ ಪೊಲೀಸ್ ಠಾಣೆಯಲ್ಲಿ ಡೆಪಾಸಿಟ್ ಇಡಿಸಿದ್ದರು. ಕಳೆದ ಮೂರು ದಿನಗಳ ಹಿಂದೆಯಷ್ಟೇ ಪೊಲೀಸ್ ಠಾಣೆಯಿಂದ ಕೋವಿಯನ್ನು ಮನೆಗೆ ತಂದಿದ್ದರು. ಪತ್ನಿ ಪೊಲೀಸರಲ್ಲಿ ಮನವಿ ಮಾಡಿ ಕೋವಿ ತರಿಸಿಕೊಂಡಿದ್ದರು. ಇದೀಗ ಅದೇ ಕೋವಿ ಪತ್ನಿಗೆ ಮುಳುವಾಯಿತು.
ಇಬ್ಬರು ಗಂಡು ಮಕ್ಕಳ ಎದುರಲ್ಲೇ ಕೃತ್ಯ ನಡೆದಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರವಾನಿಗೆ ಹೊಂದಿದ್ದ ನಾಡಬಂದೂಕಿನಿಂದ ಪತಿ ಗುಂಡಿಕ್ಕಿದ್ದಾನೆ.