
ಮಹಿಳೆ ಮೇಲೆ ಗ್ಯಾಂಗ್‌ರೇಪ್ ಆರೋಪ; ಹರಿಯಾಣದ ಬಿಜೆಪಿ ಅಧ್ಯಕ್ಷ, ಗಾಯಕನ ವಿರುದ್ಧ ಎಫ್‌ಐಆರ್ ದಾಖಲು
ಚಂಡೀಗಢ: ಮಹಿಳೆ ಮೇಲೆ ಗ್ಯಾಂಗ್‌ರೇಪ್ ಮಾಡಿದ ಆರೋಪದಲ್ಲಿ ಹರಿಯಾಣ ಬಿಜೆಪಿ ಅಧ್ಯಕ್ಷ ಮೋಹನ್ ಲಾಲ್ ಬಡೋಲಿ ಮತ್ತು ಗಾಯಕನೊಬ್ಬನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕಸೌಲಿಯ ಹೋಟೆಲ್‌ನಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಹಿಮಾಚಲ ಪ್ರದೇಶ ಪೊಲೀಸರು ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಇಬ್ಬರು ವ್ಯಕ್ತಿಗಳು ಕೃತ್ಯದ ವೀಡಿಯೊ ಮಾಡಿದ್ದಾರೆ. ವಿಷಯವನ್ನು ಯಾರಿಗಾದರೂ ಹೇಳಿದರೆ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ. ಸೋಲನ್ ಜಿಲ್ಲೆಯ ಕಸೌಲಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆರೋಪಿಗಳು ಬಡೋಲಿ ಮತ್ತು ಜೈ ಭಗವಾನ್ ಅಲಿಯಾಸ್ ರಾಕಿ ಎಂದು ಹೆಸರಿಸಲಾಗಿದೆ.
2023 ರಲ್ಲಿ ಇಬ್ಬರು ಆರೋಪಿಗಳನ್ನು ಭೇಟಿಯಾಗಿದ್ದಾಗ ಮಹಿಳೆ ತನ್ನ ಬಾಸ್ ಮತ್ತು ಸ್ನೇಹಿತನೊಂದಿಗೆ ಕಸೌಲಿಯ ಹೋಟೆಲ್‌ನಲ್ಲಿ ತಂಗಿದ್ದರು. ಬಡೋಲಿ ತನ್ನನ್ನು ರಾಜಕೀಯ ನಾಯಕ ಎಂದು ಪರಿಚಯಿಸಿಕೊಂಡರೆ, ರಾಕಿ ತನ್ನನ್ನು ಗಾಯಕ ಎಂದು ಪರಿಚಯಿಸಿಕೊಂಡಿದ್ದ.
ನಂತರ, ಮಹಿಳೆ ಮತ್ತು ಆಕೆಯ ಸ್ನೇಹಿತ ಇಬ್ಬರು ಆರೋಪಿಗಳೊಂದಿಗೆ ಕೋಣೆಗೆ ಹೋಗಿದ್ದಾರೆ. ದೂರುದಾರರಿಗೆ ಸರ್ಕಾರಿ ಉದ್ಯೋಗ ಮತ್ತು ಸಂಗೀತ ವೀಡಿಯೊದಲ್ಲಿ ಒಂದು ಅವಕಾಶ ಕೊಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಆರೋಪಿಗಳು ಸಂತ್ರಸ್ತೆಗೆ ಬಲವಂತವಾಗಿ ಮದ್ಯ ಕುಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಿರಾಕರಿಸಿದಾಗ ಅವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.