BJP-RSS ವಶಪಡಿಸಿಕೊಂಡಿರುವ ಭಾರತದ ವಿರುದ್ಧ ಹೋರಾಟ ನಡೆಸೋಣ: ರಾಹುಲ್‌ ಗಾಂಧಿ

BJP-RSS ವಶಪಡಿಸಿಕೊಂಡಿರುವ ಭಾರತದ ವಿರುದ್ಧ ಹೋರಾಟ ನಡೆಸೋಣ: ರಾಹುಲ್‌ ಗಾಂಧಿ

ನವದೆಹಲಿ: ಎಐಸಿಸಿ ಹೊಸ ಕಟ್ಟಡ ಉದ್ಘಾಟನೆ ವೇಳೆ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಬಿಜೆಪಿ, ಆರ್‌ಎಸ್‌ಎಸ್ ವಶಪಡಿಸಿಕೊಂಡಿರುವ ಭಾರತ ವಿರುದ್ಧ ಹೋರಾಟ ನಡೆಸಬೇಕೆಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಆರ್‌ಎಸ್‌ಎಸ್‌  ಸಿದ್ಧಾಂತದ ವಿರುದ್ಧ ಹೋರಾಡುತ್ತಿದ್ದೇವೆ. ಇಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಮ್ಮ ದೇಶದ ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಂಡಿವೆ. ಹೀಗಾಗಿ ಈ ಎರಡು ಸಂಸ್ಥೆಗಳು ವಶಪಡಿಸಿರುವ ಭಾರತದ ವಿರುದ್ಧ ಹೋರಾಡಬೇಕಿದೆ ಎಂದರು.

ಮಾಧ್ಯಮವು ಇನ್ನು ಮುಂದೆ ಮುಕ್ತ ಮತ್ತು ನ್ಯಾಯಯುತವಾಗಿಲ್ಲ. ಮಹಾರಾಷ್ಟ್ರದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ನಡುವೆ ಸುಮಾರು ಒಂದು ಕೋಟಿ ಹೊಸ ಮತದಾರರು ದಿಢೀರ್‌ ಕಾಣಿಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದವರ ಹೆಸರು ಮತ್ತು ವಿಳಾಸಗಳೊಂದಿಗೆ ಮತದಾರರ ಪಟ್ಟಿಯನ್ನು ಒದಗಿಸುವುದು ಚುನಾವಣಾ ಆಯೋಗದ ಕರ್ತವ್ಯ. ಆದರೆ ಚುನಾವಣಾ ಆಯೋಗವು ಈ ಮಾಹಿತಿಯನ್ನು ನೀಡಲು ನಿರಾಕರಿಸಿದೆ. ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆ ಇದೆ ಮತ್ತು ಪಾರದರ್ಶಕವಾಗಿರುವುದು ಚುನಾವಣಾ ಆಯೋಗದ ಕರ್ತವ್ಯ ಎಂದು ಹೇಳಿದರು.

ಈ ದೇಶದಲ್ಲಿ ಬಿಜೆಪಿಯನ್ನು ತಡೆಯಲು ಬೇರೆ ಯಾವುದೇ ಪಕ್ಷದಿಂದ ಸಾಧ್ಯವಿಲ್ಲ. ಅವರನ್ನು ತಡೆಯಬಲ್ಲ ಏಕೈಕ ಪಕ್ಷ ಕಾಂಗ್ರೆಸ್  ಪಕ್ಷ. ನಮ್ಮ ಸಿದ್ಧಾಂತ ನಿನ್ನೆ ಮೊನ್ನೆ ಹುಟ್ಟಿಕೊಂಡಿದ್ದಲ್ಲ. ಇಂದು ಅಧಿಕಾರದಲ್ಲಿರುವ ಜನರು ತ್ರಿವರ್ಣ ಧ್ವಜಕ್ಕೆ ನಮಸ್ಕರಿಸುವುದಿಲ್ಲ, ರಾಷ್ಟ್ರಧ್ವಜವನ್ನು ನಂಬುವುದಿಲ್ಲ ಮತ್ತು ಸಂವಿಧಾನವನ್ನು ನಂಬುವುದಿಲ್ಲ. ಅವರ ಭಾರತ ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನವನ್ನು ಹೊಂದಿರುವ ಭಾರತ ಎಂದು ಬಿಜೆಪಿಯನ್ನು ದೂರಿದರು.

Ads on article

Advertise in articles 1

advertising articles 2

Advertise under the article