ತಿರುಪತಿ ದೇವಸ್ಥಾನದ ಬಳಿ ಕಾಲ್ತುಳಿತ: 6 ಮಂದಿ ಸಾವು; ಹಲವರಿಗೆ ಗಾಯ
ತಿರುಪತಿ: ಬುಧವಾರ ಸಂಜೆ ತಿರುಪತಿ ದೇವಸ್ಥಾನದ ಬಳಿ ಕಾಲ್ತುಳಿತ ಸಂಭವಿಸಿ ಆರು ಜನರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ.
ತಿರುಪತಿಯಲ್ಲಿ ಇದೇ ಮೊದಲ ಬಾರಿಗೆ ವ್ಯಾಪಕ ಕಾಲ್ತುಳಿತ ಸಂಭವಿಸಿ ಕರ್ನಾಟಕದ ಮೂಲದ ಓರ್ವ ಮಹಿಳೆ ಸೇರಿದಂತೆ ಬರೊಬ್ಬರಿ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ವೈಕುಂಠ ದ್ವಾರ ದರ್ಶನ ಟೋಕನ್ ವಿತರಣಾ ಕೇಂದ್ರಗಳಲ್ಲಿ ಕಾಲ್ತುಳಿತ ಸಂಭವಿಸಿದ್ದು, ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಟೋಕನ್‌ಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸರತಿ ಸಾಲಿನಲ್ಲಿ ಹೋಗುವಾಗ ಮಾತಿನ ಚಕಮಕಿ ನಡೆದಿದ್ದು, ಇದೇ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದೆ.
ಇನ್ನು ಕಾಲ್ತುಳಿತ ದುರಂತಕ್ಕೆ ನಟ ಹಾಗೂ ಡಿಸಿಎಂ ಪವನ್ ಕಲ್ಯಾಣ್ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಪವನ್ ಕಲ್ಯಾಣ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಲ್ತುಳಿತ ಘಟನೆಯು ತನ್ನ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಅವರು ಹೇಳಿದರು. ಶ್ರೀನಿವಾಸನ ದರ್ಶನಕ್ಕೆ ಬಂದ ಭಕ್ತರು ಈ ರೀತಿ ಪ್ರಾಣ ಕಳೆದುಕೊಂಡಿರುವುದು ಬೇಸರ ತಂದಿದೆ. ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಅಂತೆಯೇ ಕಾಲ್ತುಳಿತ ಘಟನೆಗೆ ಸಚಿವ ನಾರಾ ಲೋಕೇಶ್ ಆಘಾತ ವ್ಯಕ್ತಪಡಿಸಿದ್ದು, 'ಭಕ್ತರ ಸಾವು ಅತೀವ ದುಃಖ ತಂದಿದೆ. ಮೃತರ ಕುಟುಂಬದ ಬೆಂಬಲಕ್ಕೆ ಸರ್ಕಾರ ನಿಲ್ಲಲಿದೆ. ಇಂತಹ ಘಟನೆಗಳು ನಡೆಯದಂತೆ ಟಿಟಿಡಿ ಇನ್ನಷ್ಟು ದೃಢವಾದ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಇಷ್ಟಕ್ಕೂ ಕಾಲ್ತುಳಿತಕ್ಕೆ ಕಾರಣವೇನು?
ಮೂಲಗಳ ಪ್ರಕಾರ ಕಾಲ್ತುಳಿತ ಸಂಭವಿಸಿದ ಬೈರಾಗಿ ಪಟ್ಟಿಡಾ ಪಾರ್ಕ್‌ನ ಟೋಕನ್ ಕೌಂಟರ್ ನಲ್ಲಿ ಮಹಿಳಾ ಭಕ್ತೆಯೊಬ್ಬರು ಅಸ್ವಸ್ಥಗೊಂಡಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಸಾಗಿಸಲೆಂದು ಗೇಟ್ ಗಳನ್ನು ಈ ವಿಚಾರ ತಿಳಿಯದ ಭಕ್ತರು ಟಿಕೆಟ್ ವಿತರಣೆಗಾಗಿ ಗೇಟ್ ತೆರೆಯುತ್ತಿದ್ದಾರೆ ಎಂದು ಭಾವಿಸಿ ಒಮ್ಮೆಲೆ ಒಳಗೆ ನುಗ್ಗಿದರು. ಈ ವೇಳೆ 200ರಿಂದ 300 ಜನ ಏಕಾಏಕಿ ಗೇಟ್ ನೊಳಗೆ ನುಗ್ಗಿದಾಗ ಅಲ್ಲಿದ್ದ ಬೆರಳೆಣಿಕೆಯಷ್ಟು ಪೊಲೀಸರಿಗೂ ಅವರನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಇದು ಕಾಲ್ತುಳಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆಗ ಅಸ್ವಸ್ಥಗೊಂಡಿದ್ದ ಮಹಿಳೆಯೇ ಸಾವಿಗೀಡಾದವರಲ್ಲಿ ಒಬ್ಬರಾದ ತಮಿಳುನಾಡು ಮೂಲಕ ಮಲ್ಲಿಕಾ ಎಂದು ಗುರುತಿಸಲಾಗಿದೆ.
CCTV ವಿಡಿಯೋ ವೈರಲ್!
ಇನ್ನು ಕಾಲ್ತುಳಿತಕ್ಕೂ ಮುನ್ನ ಪೊಲೀಸರು ಅಸ್ವಸ್ಥ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲು ಹರಸಾಹಸ ಪಡುತ್ತಿರುವ ಸಿಸಿಟಿವಿ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಮಹಿಳೆಯನ್ನು ಜನಸಮೂಹದಿಂದ ಹೊರತರಲು ಪೊಲೀಸರು ಪ್ರಯತ್ನಿಸಿದರೆ ಇದೇ ವೇಳೆ ಜನ ಏಕಾಏಕಿ ಗೇಟ್ ನೊಳಗೆ ನುಗ್ಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಟಿಟಿಡಿ ಹೇಳಿದ್ದೇನು?
ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಮಾತನಾಡಿ, ಕಾಲ್ತುಳಿತಕ್ಕೆ ಜನಸಂದಣಿ ಕಾರಣ ಎಂದು ಹೇಳಿದ್ದು, ಬೇರೆಲ್ಲಾ ಕೌಂಟರ್ನಲ್ಲಿ ಪರಿಸ್ಥಿತಿ ಶಾಂತವಾಗಿತ್ತು. ಆದರೆ ಕಾಲ್ತುಳಿತ ಸಂಭವಿಸಿದ ಈ ಕೌಂಟರ್ ನಲ್ಲಿ ಮಾತ್ರ ಒಮ್ಮೆಲೆ 4-5 ಸಾವಿರ ಮಂದಿ ಸೇರಿದ್ದರು. ಈ ವೇಳೆ ಸಂಭವಿಸಿದ ನೂಕು ನುಗ್ಗಲು ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ ಟಿಟಿಡಿ ಆಡಳಿತ ಮಂಡಳಿ ಸದಸ್ಯ ಭಾನುಪ್ರಕಾಶ್ ರೆಡ್ಡಿ, 'ಏಕಾದಶಿ ದರ್ಶನಕ್ಕೆ ಟೋಕನ್ ವಿತರಿಸಲು 91 ಕೌಂಟರ್ಗಳನ್ನು ತೆರೆಯಲಾಗಿತ್ತು, ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ದರ್ಶನಕ್ಕಾಗಿ ಟೋಕನ್ ಪಡೆಯಲು 4,000 ಕ್ಕೂ ಹೆಚ್ಚು ಭಕ್ತರು ಜಮಾಯಿಸಿದ್ದರಿಂದ ತಿರುಪತಿಯಲ್ಲಿ ಅಸ್ತವ್ಯಸ್ತವಾಗಿತ್ತು ಎಂದಿದ್ದಾರೆ.