26ನೇ ವಿವಾಹ ವಾರ್ಷಿಕೋತ್ಸವ ಆಚರಿಕೊಂಡ ಬಳಿಕ ನೇಣಿಗೆ ಶರಣಾದ ದಂಪತಿ! ಆತ್ಮಹತ್ಯೆಗೂ ಮುನ್ನ ಮಾಡಿದ ವಿಡಿಯೋದಲ್ಲಿ ಹೇಳಿದ್ದೇನು...?
ಮುಂಬೈ: 26ನೇ ವಿವಾಹ ವಾರ್ಷಿಕೋತ್ಸವವನ್ನು ಸ್ನೇಹಿತರು, ಕುಟುಂಬದವರೊಂದಿಗೆ ಸಂಭ್ರಮದಿಂದ ಆಚರಿಸಿದ್ದ ದಂಪತಿ ಬಳಿಕ ನೇಣಿಗೆ ಶರಣಾದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಜೆರಿಲ್ ಡ್ಯಾಮ್ಸನ್ ಆಸ್ಕರ್ ಮಾನ್‌ಕ್ರಿಫ್ (57) ಹಾಗೂ ಪತ್ನಿ ಅನ್ನಿ (46) ಮಂಗಳವಾರ ರಾತ್ರಿ ಎಲ್ಲರೊಡಗೂಡಿ ತಮ್ಮ 26ನೇ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿದ್ದರು. ಬಳಿಕ ಇಬ್ಬರೂ ನೇಣಿಗೆ ಶರಣಾಗಿದ್ದಾರೆ. ಮೊದಲು ಪತ್ನಿ ಣೇಣಿಗೆ ಶರಣಾಗಿದ್ದು, ಆಕೆಯ ಮೃತದೇಹಕ್ಕೆ ಮದುವೆಯಲ್ಲಿ ಧರಿಸಿದ್ದ ಬಟ್ಟೆಗಳನ್ನು ಹಾಕಿ ಪತಿ ಆಕೆಯನ್ನು ಅಲಂಕರಿಸಿದ್ದಾನೆ. ಕೊನೆಗೆ ತಾನೂ ಮದುವೆಗೆ ಧರಿಸಿದ್ದ ಬಟ್ಟೆಗಳನ್ನು ಹಾಕಿಕೊಂಡು ನೇಣಿಗೆ ಶರಣಾಗಿದ್ದಾನೆ.
ಜೆರಿಲ್ ಹಾಗೂ ಅನ್ನಿಗೆ ಮಕ್ಕಳಾಗಿರಲಿಲ್ಲ. ಆತ್ಮಹತ್ಯೆಗೆ ಶರಣಾಗುವ ಮೊದಲು ದಂಪತಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ನಮ್ಮ ಸಾವಿಗೆ ನಾವೇ ಕಾರಣ ಎಂದು ತಿಳಿಸಿದ್ದರು. ಇಷ್ಟು ಮಾತ್ರವಲ್ಲದೇ ತಮ್ಮ ಎಲ್ಲಾ ಆಸ್ತಿಯನ್ನು ಕುಟುಂಬಸ್ಥರು ಹಂಚಿಕೊಳ್ಳುವಂತೆ ಮಾನವಿ ಮಾಡಿದ್ದರು.
ತಮ್ಮ ಸಾವಿನ ಬಳಿಕ ಒಂದೇ ಶವಪೆಟ್ಟಿಗೆಯಲ್ಲಿ ಕೈ-ಕೈ ಹಿಡಿದಿರುವಂತೆ ಅಂತಿಮ ಸಂಸ್ಕಾರ ಮಾಡಬೇಕು ಎಂದು ದಂಪತಿ ಆಸೆ ವ್ಯಕ್ತಪಡಿಸಿದ್ದರು. ಇವರ ಕೊನೆಯ ಆಸೆಯಂತೆ ಒಂದೇ ಶವಪೆಟ್ಟಿಗೆಯಲ್ಲಿ ಇವರಿಬ್ಬರ ಮೃತದೇಹ ಇರಿಸಿ ಅಂತ್ಯಸಂಸ್ಕಾರ ಮಾಡಲಾಗಿದೆ.