
ಅಪಘಾತಕ್ಕೆ ಕಡಿವಾಣ ಹಾಕಲು ಒತ್ತಾಯ; ಇಂದು 'ಉಚ್ಚಿಲ ನಾಗರಿಕ ಹೋರಾಟ ಸಮಿತಿ' ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ
ಉಚ್ಚಿಲ: ಉಚ್ಚಿಲ ಬಡಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪಘಾತದಿಂದ ಹಲವು ಜೀವ ಬಲಿಯಾಗಿದ್ದು, ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯೇ ಕಾರಣವಾಗಿದ್ದು, ಇದನ್ನು ವಿರೋಧಿಸಿ ಇಂದು (ಜನವರಿ 20) ಉಚ್ಚಿಲ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ನಡೆಸಲು ಉಚ್ಚಿಲ ನಾಗರಿಕ ಹೋರಾಟ ಸಮಿತಿ ನಿರ್ಧರಿಸಿದೆ.
ಬಡಾ ಗ್ರಾಮದ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ನಿರಂತರ ಅಪಘಾತ ಸಂಭವಿಸುತ್ತಿದ್ದು, ಇನ್ನಾದರೂ ಜನರ ಪ್ರಾಣ ರಕ್ಷಣೆಗಾಗಿ ಬ್ಯಾರಿಕೇಡ್, ಜೀಬ್ರಾ ಕ್ರಾಸಿಂಗ್, ದಾರಿದೀಪ, ಅವೈಜ್ಞಾನಿಕ ರೀತಿ ನಿರ್ಮಾಣವಾದ ರೋಡ್ ಕ್ರಾಸಿಂಗ್ ಬದಲಾಯಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಇಂದು ಬೆಳಗ್ಗೆ ಧರಣಿ ನಡೆಸಲು ಉಚ್ಚಿಲ ನಾಗರಿಕ ಹೋರಾಟ ಸಮಿತಿ ಸಿದ್ಧತೆ ಕೈಗೊಂಡಿದೆ.
ಬೆಳಿಗ್ಗೆ 10ರಿಂದ 11:30 ವರೆಗೆ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ಮಾಡಲು ನಿರ್ಧರಿಸಲಾಗಿದ್ದು, ಈ ಹೋರಾಟಕ್ಕೆ ಗ್ರಾಮದ ಸಮಸ್ತ ಜನರು, ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು, ವ್ಯಾಪಾರಸ್ಥರು, ಆಟೋ ಚಾಲಕರು, ಟೆಂಪೋ ಚಾಲಕರು ಹಾಗೂ ಸಾರ್ವಜನಿಕರು, ಸಂಘ ಸಂಸ್ಥೆಯವರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಉಚ್ಚಿಲ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಸಿರಾಜ್ NH ತಿಳಿಸಿದ್ದಾರೆ.
ಉಚ್ಚಿಲ ಪೇಟೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಳೆದ 1 ವರ್ಷದಿಂದ ಆದ ಅಪಘಾತದಿಂದ ಸುಮಾರು 14 ಜನರು ಪ್ರಾಣ ಕಳೆದುಕೊಂಡಿದ್ದು, ಹಲವು ಮಂದಿ ಅಂಗಾಂಗ ಕಳೆದುಕೊಂಡಿದ್ದಾರೆ. ಸುಮಾರು 60ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ದಾಖಲಾಗಿವೆ.
ಈ ಬಗ್ಗೆ ಗ್ರಾಮಸ್ಥರು ಸೇರಿ ಜಿಲ್ಲಾಧಿಕಾರಿ, ಬಡಾಗ್ರಾಮ ಪಂಚಾಯತ್, ಪೋಲಿಸ್ ಇಲಾಖೆ, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಪಟ್ಟ ಸರಕಾರಿ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಹೆದ್ದಾರಿ ಗುತ್ತಿಗೆದಾರರ ಕಂಪನಿಯವರಿಗೆ ಮನವಿ ಮಾಡಿಕೊಂಡಿದ್ದರೂ ಇಲ್ಲಿಯವರೆಗೂ ಪರಿಹಾರ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟದ ವೇಳೆ ಒತ್ತಾಯಿಸಲಾಗುವುದು ಎಂದು ಸಿರಾಜ್ NH ತಿಳಿಸಿದ್ದಾರೆ.