ಉದ್ಯಾವರ ಬಳಿ ಈಚರ್ ಲಾರಿ- ದ್ವಿಚಕ್ರ ವಾಹನ ಮಧ್ಯೆ ಭೀಕರ ಅಪಘಾತ: ಸವಾರ ಮೃತ್ಯು; ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾದ ಈಚರ್ ಲಾರಿ, ಬೈಕ್
Saturday, January 11, 2025
ಉಡುಪಿ: ಈಚರ್ ಲಾರಿ ಹಾಗೂ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ನಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಶುಕ್ರವಾರ ಮಧ್ಯರಾತ್ರಿ 1.30ರ ಸುಮಾರಿಗೆ ಉಡುಪಿಯ ಉದ್ಯಾವರ ಬಲೈಪಾದೆ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.
ಅಪಘಾತದ ರಭಸಕ್ಕೆ ಈಚರ್ ವಾಹನ ಹಾಗೂ ಬೈಕ್ ಸುಟ್ಟು ಕರಕಲಾಗಿದೆ. ಮೃತ ಸವಾರನನ್ನು ಪಣಿಯೂರು ನಿವಾಸಿ ಅವಿನಾಶ್ ಆಚಾರ್ಯ (19) ಎಂದು ಗುರುತಿಸಲಾಗಿದೆ.
ಅಪಘಾತದ ವೇಳೆ ಈಚರ್ ಲಾರಿಯ ಅಡಿಗೆ ಬೈಕ್ ಸಿಲುಕಿದ್ದು, ಬೈಕ್ ಅನ್ನು ಈಚರ್ ಎಳೆದೊಯ್ದ ಪರಿಣಾಮ ಎರಡು ವಾಹನಗಳಿಗೂ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾಗಿದೆ. ಕೇರಳ ಮೂಲದ ಲಾರಿ ಇದಾಗಿದ್ದು, ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಉಡುಪಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಅಷ್ಟೊತ್ತಿಗೆ ಎರಡು ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು.