ರಾಜ್ಯದಲ್ಲಿರುವುದು ಬೆಲೆ ಏರಿಕೆಯ ಭ್ರಷ್ಟ ಸರಕಾರ; ಅಭಿವೃದ್ಧಿ ಶೂನ್ಯ ಜಾಹಿರಾತಿನ ಸರಕಾರ: ಉಡುಪಿ 'ಜನಾಕ್ರೋಶ ಯಾತ್ರೆ'ಯಲ್ಲಿ ವಿಜಯೇಂದ್ರ ಆಕ್ರೋಶ

ರಾಜ್ಯದಲ್ಲಿರುವುದು ಬೆಲೆ ಏರಿಕೆಯ ಭ್ರಷ್ಟ ಸರಕಾರ; ಅಭಿವೃದ್ಧಿ ಶೂನ್ಯ ಜಾಹಿರಾತಿನ ಸರಕಾರ: ಉಡುಪಿ 'ಜನಾಕ್ರೋಶ ಯಾತ್ರೆ'ಯಲ್ಲಿ ವಿಜಯೇಂದ್ರ ಆಕ್ರೋಶ

ಉಡುಪಿ: ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಡವರ ಪರ ಇರುವ ಸರಕಾರ ಅಲ್ಲ, ಬೆಲೆ ಏರಿಕೆ ಮಾಡುವ ಮೂಲಕ ಬಡವರ ಮೇಲೆ ಬರೆ ಎಳೆದಿರುವ ಭ್ರಷ್ಟ ಸರಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ ಹೊರ ಹಾಕಿದ್ದಾರೆ.







ರಾಜ್ಯ ಕಾಂಗ್ರೆಸ್ ಸರಕಾರದ ಬೆಲೆ ಏರಿಕೆ, ಮುಸ್ಲಿಂ ಓಲೈಕೆ, ಭ್ರಷ್ಟಾಚಾರದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಉಡುಪಿ ಕಡಿಯಾಳಿಯ ಬಿಜೆಪಿ ಕಚೇರಿಯ ಮುಂಭಾಗದ ಮೈದಾನದಲ್ಲಿ ಗುರುವಾರ ಆಯೋಜಿಸಿದ "ಜನಾಕ್ರೋಶ ಯಾತ್ರೆ"ಯ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿಕಾರಿದರು.

ರಾಜ್ಯ ಸರ್ಕಾರದ ಆಡಳಿತ ವೈಖರಿ ನೋಡಿದರೆ ಇದು ಜನಪ್ರಿಯ ಸರಕಾರ ಅಲ್ಲ. ಇದು ಕೇವಲ ಜಾಹಿರಾತಿನ ಸರಕಾರ. ಇದು ಬಡವರ ಪರವಾಗಿ ಇರುವ ಸರ್ಕಾರ ಅಲ್ಲ. ಬೆಲೆ ಏರಿಕೆ ಮೂಲಕ ಬಡವರಿಗೆ ಬರೆ ಎಳೆಯುವ ಸರಕಾರ. ಇದು ಅಭಿವೃದ್ಧಿ ಶೂನ್ಯ ಸರ್ಕಾರ. ಅಹಿಂದ ಹೆಸರು ಹೇಳಿಕೊಂಡು ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಕೂತಿದ್ದಾರೆ. ಆದರೆ ಹಿಂದುಳಿದ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು‌.

ಸಿಎಂ ಸಿದ್ದರಾಮಯ್ಯ ಕೇವಲ ಅಲ್ಪಸಂಖ್ಯಾತರ ಹಿಂದೆ ಹೋಗುತ್ತಿದ್ದಾರೆ. ಇದು ಹಿಂದೂ ವಿರೋಧಿ ಸರ್ಕಾರ. ನಮ್ಮ ಹೋರಾಟ ರಾಜಕೀಯ ಗಿಮಿಕ್ ಅಲ್ಲ. ಈಗ ಯಾವುದೇ ಚುನಾವಣೆ ಇಲ್ಲ. ರಾಜ್ಯದಲ್ಲಿ ಉಡುಪಿ ಜಿಲ್ಲೆ ಎಲ್ಲಿದೆ ಗೊತ್ತಿದ್ಯಾ?‌. ಯಡಿಯೂರಪ್ಪ ಸಿಎಂ ಇದ್ದಾಗ ಕರಾವಳಿ ಅಭಿವೃದ್ಧಿ ಆಯ್ತು. ಮುಖ್ಯಮಂತ್ರಿಗಳೇ ಎಷ್ಟು ಬಾರಿ ಉಡುಪಿಗೆ ಬಂದಿದ್ದೀರಿ ? ಎಷ್ಟು ಕೋಟಿ ಅನುದಾನ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದರು. 

ಕಾಪು ಮಾರಿಯಮ್ಮನ ದೇಗುಲಕ್ಕೆ ಅನುದಾನ ಕೇಳಿ ಐದು ಬಾರಿ ಹೋಗಿದ್ದರಂತೆ. ಆದರೆ ಒಂದು ನಯಾ ಪೈಸೆ ಅನುದಾನ ನೀಡಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ದೇವಸ್ಥಾನ ಮಠಮಾನ್ಯಗಳಿಗೆ ಅನುದಾನ ನೀಡಲಾಗಿತ್ತು. ಆದರೆ ಸಿದ್ದರಾಮಯ್ಯ ಸರಕಾರ ಮೌಲ್ವಿಗಳ ಸಂಬಳ ಜಾಸ್ತಿ ಮಾಡಿದರು. ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಂರಿಗೆ ನಾಲ್ಕು ಪರ್ಸೆಂಟ್ ಜಾಸ್ತಿ ಮಾಡಿದ್ದಾರೆ. ಈ ಬಗ್ಗೆ ಬಿಜೆಪಿ ಶಾಸಕರು ಹೋರಾಟ ಮಾಡಿದ್ದಾರೆ. ಹೋರಾಟ ಮಾಡಿದ ಶಾಸಕರನ್ನು ಆರು ತಿಂಗಳು ಸಸ್ಪೆಂಡ್ ಮಾಡಿದ್ದಾರೆ. ಪುಣ್ಯಾತ್ಮ ಸ್ಪೀಕರ್ ಈ ಕೆಲಸ ಮಾಡಿದ್ದಾರೆ. ಇವರು ಸಂವಿಧಾನ ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾರೆ. ದಲಿತರನ್ನು ಮತ ಬ್ಯಾಂಕ್ ಮಾಡಿಕೊಂಡು ಮೋಸ ಮಾಡಿದ ಪಕ್ಷ ಕಾಂಗ್ರೆಸ್. ಶೈಕ್ಷಣಿಕ ಸಾಮಾಜಿಕವಾಗಿ ಮೇಲೆತ್ತುವ ಕೆಲಸ ಮಾಡಿಲ್ಲ ಎಂದು ಗುಡುಗಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್  ಚೌಟ   ಸುನೀಲ್ ಕುಮಾರ್, ಶ್ರೀರಾಮಲು,  ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ್ ಗಂಟಿಹೊಳಿ, ಯಶಪಾಲ್ ಸುವರ್ಣ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್,  ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article