
ಮೇ ಅಂತ್ಯದೊಳಗೆ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ಮುಗಿಯದಿದ್ದರೆ ಸಂಸದರ ಕಚೇರಿಗೆ ಮುತ್ತಿಗೆ; 2 ತಿಂಗಳೊಳಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಬಿಜೆಪಿ ಜಿಲ್ಲಾಧ್ಯಕ್ಷರು ತಲೆ ಬೊಳಿಸಿಕೊಳ್ಳಲು ಸಿದ್ಧರಿದ್ದಾರಾ..? ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಅಮೃತ್ ಶೆಣೈ ಸವಾಲ್
ಉಡುಪಿ: ಮೇ ತಿಂಗಳ ಅಂತ್ಯದೊಳಗೆ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ಮುಗಿಯದಿದ್ದರೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಅಮೃತ್ ಶೆಣೈ ಎಚ್ಚರಿಕೆ ನೀಡಿದರು.
ಉಡುಪಿ ಕಿದಿಯೂರು ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.1ರಂದು ಶಾಲಾ ಮಕ್ಕಳು ಯಾವುದೇ ಭಯ ಇಲ್ಲದೆ ಆರಾಮವಾಗಿ ಶಾಲೆಗೆ ಹೋಗುವ ವಾತಾವರಣ ಸೃಷ್ಟಿ ಮಾಡಬೇಕು. ಇಲ್ಲದಿದ್ದರೆ ನಾವು ಮತ್ತೆ ಬೀದಿಗಿಳಿಯುತ್ತೇವೆ. ಸಂಸದರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಬಳಿಕ ಸಂಸದರು ಅಲ್ಲಿಯೇ ಅಧಿಕಾರಿಗಳನ್ನು ಕರೆದು ಸಭೆ ಮಾಡಬೇಕು. ಸಾರ್ವಜನಿಕರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿಜೆಪಿ ನಾಯಕರು ಮುಗಿಯುವ ಹಂತದಲ್ಲಿ ಪ್ರತಿಭಟನೆ ಮಾಡುತ್ತಾರೆಂದು ನಮ್ಮನ್ನು ಟೀಕಿಸುತ್ತಿದ್ದಾರೆ. ಮೂರು ಮೂರು ಬಾರಿ ಗಡುವು ನೀಡಿದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನೆಷ್ಟು ದಿನ ಬೇಕು ನಿಮಗೆ. ಎರಡು ತಿಂಗಳೊಳಗೆ ಆದ್ರೂ ಕಾಮಗಾರಿ ಮುಗಿಯುತ್ತಾ ಎಂದು ವಾಗ್ದಾಳಿ ನಡೆಸಿದ್ರು.
ಎರಡು ತಿಂಗಳೊಳಗೆ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ಮುಗಿಯದಿದ್ದರೆ ಬಿಜೆಪಿ ಜಿಲ್ಲಾಧ್ಯಕ್ಷರು ಇಂದ್ರಾಳಿಯ ರೈಲ್ವೆ ಸೇತುವೆಯ ಬಳಿ ಕುಳಿತು ತಲೆ ಬೊಳಿಸಿಕೊಳ್ಳಬೇಕು. ಈ ಸವಾಲನ್ನು ಸ್ವೀಕರಿಸಿ ಎರಡು ದಿನದೊಳಗೆ ಘೋಷಣೆ ಮಾಡಬೇಕು. ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ಇದು ನನ್ನ ಸವಾಲ್. ನೀವು ಈ ಸವಾಲನ್ನು ಸ್ವೀಕಾರ ಮಾಡ್ತೀರಾ ಅಂತಾ ಎರಡ್ಮೂರು ದಿನ ಕಾದುನೋಡುತ್ತೇನೆ. ಇಲ್ಲದಿದ್ದರೆ ನೀವು ಕ್ಷಮೆ ಕೇಳಿ, ಸುಮ್ಮನೆ ರಾಜಕೀಯ ಮಾಡಬೇಡಿ. ಮುಗಿಯುವ ಹಂತದಲ್ಲಿ ಪ್ರತಿಭಟನೆ ಮಾಡುವಂತಹ ಚಿಲ್ಲರೆ ರಾಜಕೀಯ ನಾವು ಯಾರು ಮಾಡಿಲ್ಲ. ಕಾಮಗಾರಿ ಮುಗಿಯುತ್ತಿಲ್ಲ ಎಂದು ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.