ಕರಾವಳಿ ಜಿಲ್ಲೆಗಳಿಗೆ ಶೀಘ್ರವೇ ತಜ್ಞ ಪಶುವೈದ್ಯರ ನಿಯೋಜನೆ: ಸಚಿವ ಕೆ.ವೆಂಕಟೇಶ್ ಭರವಸೆ

ಕರಾವಳಿ ಜಿಲ್ಲೆಗಳಿಗೆ ಶೀಘ್ರವೇ ತಜ್ಞ ಪಶುವೈದ್ಯರ ನಿಯೋಜನೆ: ಸಚಿವ ಕೆ.ವೆಂಕಟೇಶ್ ಭರವಸೆ

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ತಜ್ಞ ಪಶುವೈದ್ಯರ ಹುದ್ದೆಗಳು ಸಾಕಷ್ಟು ಖಾಲಿ ಇವೆ. ಕರಾವಳಿಗೆ ನಿಯೋಜನೆಗೊಳ್ಳುವ ಪಶುವೈದ್ಯರು ಇಲ್ಲಿ ಕರ್ತವ್ಯ ನಿರ್ವಹಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಇಲಾಖೆಯಲ್ಲಿ ಖಾಯಂಮಾತಿಗೊಂಡ ತಜ್ಞ ವೈದ್ಯರನ್ನು ಶೀಘ್ರವೇ ಕರಾವಳಿ ಭಾಗಕ್ಕೆ ನಿಯೋಜಿಸುವ ಆಲೋಚನೆ ಇದೆ ಎಂದು ರಾಜ್ಯ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆಯ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಲಾದ ಮೈತ್ರಿ ಕಾರ್ಯಕರ್ತರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚೆಗೆ ಕರಾವಳಿ ಜಿಲ್ಲೆಗಳಿಗೆ 22 ಮಂದಿ ತಜ್ಞ ಪಶುವೈದ್ಯರ ನಿಯೋಜನೆ ಮಾಡಲಾಗಿತ್ತು. ಆದರೆ ಇವರಲ್ಲಿ ಕೇವಲ 7 ಮಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉಳಿದ 15 ಮಂದಿ ಬರಲೇ ಇಲ್ಲ. ಗುತ್ತಿಗೆ ಆಧಾರದಲ್ಲಿ ನೇಮಕಾತಿಗೊಂಡ ವೈದ್ಯರ ಮೇಲೆ ನಮಗೆ ಹೆಚ್ಚಿನ ನಿಯಂತ್ರಣವಿರುವುದಿಲ್ಲ. ಆದ್ದರಿಂದ ಖಾಯಂಮಾತಿಗೊಂಡ ವೈದ್ಯರನ್ನು ಇಲ್ಲಿಗೆ ನಿಯೋಜಿಸುವ ಚಿಂತನೆ ಇದೆ ಎಂದರು.

ಹಿಂದೆ ಪಶುಸಖಿಯರೆಂದು ಕರೆಯಲಾಗುತಿದ್ದವರನ್ನು ಈಗ ಮೈತ್ರಿ ಕಾರ್ಯಕರ್ತೆಯರೆಂದು ಕರೆಯ ಲಾಗುತ್ತಿದೆ. ಮನೆ ಮನೆಗೆ ತೆರಳಿ ಅಲ್ಲಿರುವ ಜಾನುವಾರು, ಆಡು, ಕುರಿ ಹಾಗೂ ಇತರ ಪಶುಗಳ ಮಾಹಿತಿ ಸಂಗ್ರಹ, ಆರೋಗ್ಯ ಸಮಸ್ಯೆಗಳನ್ನು ನೋಡಿಕೊಳ್ಳುತಿದ್ದಾರೆ. ಇವರಿಗೆ ಇವುಗಳ ಚಿಕಿತ್ಸೆಯ ತರಬೇತಿಯನ್ನೂ ನೀಡಲಾಗುತ್ತಿದೆ ಎಂದರು.

ಇದು ಕೇಂದ್ರ ಸರಕಾರದ ಉತ್ತಮ ಕಾರ್ಯಕ್ರಮಗಳಲ್ಲೊಂದು. ಆದರೆ ಇವರಿಗೆ ನೀಡುವ 3,500ರೂ.ಗೌರವಧನ ಇವರು ಮಾಡುವ ಕೆಲಸಕ್ಕೆ ತೀರಾ ಕಡಿಮೆಯಾಗಿದ್ದು, ಇದನ್ನು ಕನಿಷ್ಠ 5,000ರೂ.ಗಳಿಗೆ ಏರಿಸುವಂತೆ ತಾನು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ. ಕೇಂದ್ರದ ಗೌರವ ಧನಕ್ಕೆ ರಾಜ್ಯದ ಪಾಲನ್ನು ನೀಡುವಂತೆ ಸಲಹೆಗಳಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡು ತ್ತೇನೆ ಎಂದು ಸಚಿವ ವೆಂಕಟೇಶ್ ತಿಳಿಸಿದರು.

ಇಲಾಖೆಯಲ್ಲಿ 700 ಮಂದಿ ಬಿ ದರ್ಜೆ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. 250 ಮಂದಿ ಇನ್‌ಸ್ಪೆಕ್ಟರ್‌ಗಳ ನೇಮಕಾತಿ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಅವರನ್ನು ವಿವಿಧ ಕಡೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ಕರಾವಳಿ ಭಾಗದಲ್ಲಿ ಪಶುಪಾಲನಾ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಅರಿತು ಅವುಗಳ ಪರಿಹಾರಕ್ಕೆ ಕ್ರಮಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.

Ads on article

Advertise in articles 1

advertising articles 2

Advertise under the article