
ಕಸಾಪದ ಬೈಲಾಕ್ಕೆ ತಿದ್ದುಪಡಿ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ: ಮಹೇಶ್ ಜೋಶಿ
ಉಡುಪಿ: ನಾನು ಚುನಾವಣಾ ಪ್ರಣಾಳಿಕೆಯಲ್ಲಿ ಕಸಾಪ ಬೈಲಾಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವುದಾಗಿ ಹೇಳಿದ್ದೆ. ಆ ಪ್ರಕಾರ ನಾನು ನಡೆದುಕೊಂಡಿದ್ದೇನೆ. ಬೈಲಾದಲ್ಲಿ ಸ್ಪಷ್ಟತೆ ತರುವುದು ಅಧ್ಯಕ್ಷನ ಕರ್ತವ್ಯ. ನಾನು ಕರ್ತವ್ಯಭ್ರಷ್ಟನಾಗಲಾರೆ ಎಂದು ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಸ್ಪಷ್ಟನೆ ನೀಡಿದ್ದಾರೆ..
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸಾಪದ ಬೈಲಾಕ್ಕೆ ತಿದ್ದುಪಡಿ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಅಲ್ಲದೆ ಕಸಾಪ ಬೈಲಾ ಇದೇ ಮೊದಲ ಬಾರಿಗೆ ತಿದ್ದುಪಡಿ ಮಾಡಲಾಗುತ್ತಿಲ್ಲ, ಈ ಹಿಂದೆಯೂ ಮಾಡಲಾಗಿದೆ. ನಾವು ಈವರೆಗೆ ಮಾಡಲಾದ ತಿದ್ದುಪಡಿ ಯಾವುದೂ ಕೂಡ ಕಾನೂನು ಬಾಹಿರ ಅಲ್ಲ ಎಂದರು.
ಈಗಿರುವ ಬೈಲಾದಲ್ಲಿ ನಾಮನಿರ್ದೇಶಿತ ಸದಸ್ಯರ ಅವಧಿ, ಕಾರ್ಯಕಾರಿ ಸದಸ್ಯರು ಸತತ 3 ಬಾರಿ ಸಭೆಗೆ ಗೈರು ಹಾಜರಾದರೆ ಕ್ರಮ, ಮಹಿಳೆಯರು ಅಧ್ಯಕ್ಷರಾಗುವುದಕ್ಕೆ ಅವಕಾಶ, ಅಧ್ಯಕ್ಷರ ಅಕಾಲಿಕ ಮರಣದ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ವಿಷಯಗಳ ಬಗ್ಗೆ ಸ್ಪಷ್ಟತೆ ಇಲ್ಲ. ಈ ಎಲ್ಲ ವಿಷಯಗಳಿಗೆ ಸ್ಪಷ್ಟತೆ ತರುವುದಕ್ಕಾಗಿ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ನಿಬಂಧನೆ ತಿದ್ದುಪಡಿ ಸಲಹಾ ಸಮಿತಿ ಹಾಗೂ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆ ಮಾಡಿ, ಎಲ್ಲರು ಒಪ್ಪಿಗೆ ಕೊಟ್ಟರೆ ಏಕಧ್ವನಿ, ಇಲ್ಲದಿದ್ದರೆ ಮತಗಳಲ್ಲಿ ಬದಲಾವಣೆ ಮಾಡಲಾಗುವುದು. ಇಲ್ಲಿ ಎಲ್ಲವೂ ಚರ್ಚೆ ಮಾಡಿ ಅನಿವಾರ್ಯತೆ ಹಿನ್ನೆಲೆಯಲ್ಲಿ ಬದಲಾವಣೆಗಳನ್ನು ಮಾಡಿದ್ದೇವೆ. ನಮ್ಮ ಕೆಲವು ನಿಬಂಧನೆಗಳಲ್ಲಿ ಸ್ಪಷ್ಟತೆ ಇಲ್ಲದೆ ಸಮಸ್ಯೆಗಳಾಗುತ್ತಿವೆ. ಹಾಗಾಗಿ ಕಾನೂನು ತಜ್ಞರ ಅಭಿಪ್ರಾಯದಂತೆ ಕಾನೂನಾತ್ಮಕ ತಿದ್ದುಪಡಿಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಪರಿಷತ್‌ಗೆ 35-40ಕೋಟಿ ಅನುದಾನ ನೀಡುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರಕಾರ ನಮಗೆ ಕೇವಲ 5ಕೋಟಿ ರೂ. ಅನುದಾನ ನೀಡಿದೆ. ಇದು ತುಂಬಾ ಕಡಿಮೆ ಆಗಿದೆ. ನಾವು ಜಿಲ್ಲಾ ಸಮ್ಮೇಳನ ಗಳಿಗೆ ತಲಾ 5ಲಕ್ಷ ರೂ. ಅನುದಾನವನ್ನು ನೀಡುತ್ತೇವೆ ಎಂದು ಅವರು ತಿಳಿಸಿದರು.