
ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ನೇಮಕ: ಸಚಿವ ಈಶ್ವರ ಖಂಡ್ರೆ
ಬೆಂಗಳೂರು: ‘ಖ್ಯಾತ ಕ್ರೀಡಾಪಟು, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮ ನಿರ್ದೇಶನ ಮಾಡಲಾಗುವುದುʼ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈಶ್ವರ ಬಿ. ಖಂಡ್ರೆ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಕುಂಬ್ಳೆ ಅವರು ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅನುಭವವಿದೆ. ಅವರು ಅರಣ್ಯ ಸಂರಕ್ಷಣೆ, ವೃಕ್ಷ ಸಂವರ್ಧನೆ ಮತ್ತು ವನ್ಯಜೀವಿ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಲಿದ್ದಾರೆ.
“ಅನಿಲ್ ಕುಂಬ್ಳೆ ಅವರಿಗೆ ವನ್ಯಜೀವಿಗಳ ಬಗ್ಗೆ ಅಪಾರ ಕಾಳಜಿ ಮತ್ತು ಅರಣ್ಯಗಳ ಬಗ್ಗೆ ಪ್ರೀತಿ ಇದೆ. ಅವರು ಯಾವುದೇ ಸಂಭಾವನೆ ಪಡೆಯದೇ ರಾಯಭಾರಿಯಾಗಿ ಸೇವೆ ಸಲ್ಲಿಸಲು ಸಮ್ಮತಿಸಿದ್ದಾರೆ” ಎಂದು ಸಚಿವ ಶ್ರೀ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ಈ ನಾಮನಿರ್ದೇಶನದಿಂದ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ, ಪರಿಸರ ಸಂವರ್ಧನೆ ಹಾಗೂ ಹಸಿರು ಕರ್ನಾಟಕದ ದೃಷ್ಟಿಕೋನದಿಂದ ಮಹತ್ತರ ಬದಲಾವಣೆ ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
8,848 ವನಮಹೋತ್ಸವ:ಈಶ್ವರ ಖಂಡ್ರೆ
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮವನ್ನು ಜಗತ್ತೇ ಎದುರಿಸುತ್ತಿದ್ದು, ಈ ಕಾಲಘಟ್ಟದಲ್ಲಿ ಹಸಿರು ಹೊದಿಕೆಯ ಹೆಚ್ಚಳ, ಅರಣ್ಯ ಸಂರಕ್ಷಣೆ ಮತ್ತು ನಿರ್ವಹಣೆ ಇಲಾಖೆಯ ಜವಾಬ್ದಾರಿಯಾಗಿದೆ. ಕಳೆದ 2 ವರ್ಷಗಳಲ್ಲಿ ಸುಮಾರು 8848 ವನಮಹೋತ್ಸವ ನಡೆಸಲಾಗಿದ್ದು, ಅರಣ್ಯ ಪ್ರದೇಶ, ರಸ್ತೆ ಬದಿ ಮತ್ತು ಸರ್ಕಾರಿ ಜಾಗದಲ್ಲಿ ಸುಮಾರು 8.5 ಕೋಟಿ ಸಸಿಗಳನ್ನು ನೆಟ್ಟು, ಪೋಷಿಸಲಾಗಿದೆ. 2023-24 ಮತ್ತು 2024-25ರ ಸಾಲಿನಲ್ಲಿ ಒಟ್ಟು 120975 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು, 25 ಹೊಸ ವೃಕ್ಷೋದ್ಯಾನ ಮತ್ತು 35 ದೇವರ ಕಾಡು ನಿರ್ಮಾಣ ಮಾಡಲಾಗಿದೆ ಎಂದು ವಿವರ ನೀಡಿದರು. ಕಳೆದ 2 ವರ್ಷದಲ್ಲಿ ಕೃಷಿಕರಿಗೆ ತಮ್ಮ ಜಮೀನಿನಲ್ಲಿ ನಾಟಿ ಮಾಡಲು ಮತ್ತು ಇತರ ಜಮೀನಿನಲ್ಲಿ ನೆಡಲು ಒಟ್ಟಾರೆ 3.70 ಕೋಟಿ ಸಸಿಗಳನ್ನು ವಿತರಣೆ ಮಾಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಮಾದಪ್ಪನಹಳ್ಳಿ 153 ಎಕರೆಯಲ್ಲಿ ಬೃಹತ್ ಉದ್ಯಾನ ನಿರ್ಮಾಣ
ಬೆಂಗಳೂರಿನಲ್ಲಿ ಶ್ವಾಸತಾಣಗಳನ್ನು ಉಳಿಸಲು, ಬೆಳೆಸಲು ಸರ್ಕಾರ ನಿರ್ಧರಿಸಿದ್ದು, ಯಲಹಂಕ ಬಳಿಯ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶದಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ಲಾಲ್ ಬಾಗ್ ಹೈದರಾಲಿಯ ಕಾಲದಲ್ಲಿ ನಿರ್ಮಾಣವಾಗಿತ್ತು, ಕಬ್ಬನ್ ಪಾರ್ಕ್ ಬ್ರಿಟಿಷರ ಕಾಲದಲ್ಲಿ ರೂಪುಗೊಂಡಿತು. ಶತಮಾನವೇ ಕಳೆದರೂ ಮತ್ತೊಂದು ಬೃಹತ್ ಉದ್ಯಾನ ಬೆಂಗಳೂರಿನಲ್ಲಿ ಆಗಲಿಲ್ಲ. ಹೀಗಾಗಿ ತಾವು ಅರಣ್ಯ ಸಚಿವನಾದ ತರುವಾಯ ನೀಲಗಿರಿ ಬೆಳೆಸಲು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಿದ್ದ 153 ಎಕರೆ ಜಮೀನನ್ನು ಜೂ.2ರಂದು ಮರಳಿ ಅರಣ್ಯ ಇಲಾಖೆಗೆ ಪಡೆದು ಅಲ್ಲಿ ಉದ್ಯಾನ ನಿರ್ಮಿಸಲಾಗುವುದು, 2 ತಿಂಗಳಲ್ಲಿ ಇದರ ಶಂಕುಸ್ಥಾಪನೆ ನೆರವೇರಲಿದೆ ಎಂದರು.