
ಸಾಲ ಬಾಧೆ; ಕಾರಿನೊಳಗೆ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ
ಹರ್ಯಾಣ: ಸಾಲ ಬಾಧೆಯಿಂದ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಯಾರ್ಣದ ಪಂಚಕುಲದಲ್ಲಿ ನಡೆದಿದೆ.
ಡೆಹ್ರಾಡೂನ್‌ನ ಒಂದೇ ಕುಟುಂಬದ 7 ಮಂದಿ ವಿಷ ಸೇವಿಸಿ ಜೀವ ಬಿಟ್ಟಿದ್ದಾರೆ. ಸೆಕ್ಟರ್ 27 ರಲ್ಲಿ ಮನೆಯ ಹೊರಗೆ ನಿಲ್ಲಿಸಿದ್ದ ಕಾರಿನೊಳಗೆ ಶವಗಳು ಇರುವುದು ಪತ್ತೆಯಾಗಿದೆ. ಕುಟುಂಬವು ಭಾರೀ ಸಾಲ ಮತ್ತು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರಿಂದ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಹೇಳಲಾಗಿದೆ.
ಡೆಹ್ರಾಡೂನ್‌ನ ನಿವಾಸಿ ಪ್ರವೀಣ್ ಮಿತ್ತಲ್, ಪಂಚಕುಲದ ಬಾಗೇಶ್ವರ ಧಾಮದಲ್ಲಿ ತಮ್ಮ ಕುಟುಂಬದೊಂದಿಗೆ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು ಎಂದು ಮೂಲಗಳು ತಿಳಿಸಿವೆ.
ಕಾರ್ಯಕ್ರಮ ಮುಗಿಸಿಕೊಂಡು ಕುಟುಂಬವು ಡೆಹ್ರಾಡೂನ್‌ಗೆ ಹಿಂತಿರುಗುತ್ತಿದ್ದಾಗ ಭಾನುವಾರ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಕುಟುಂಬವನ್ನು ಮೊದಲು ಸ್ಥಳೀಯರು ನೋಡಿದ್ದಾರೆ. ಕಾರಿನೊಳಗೆ ಅವರು ಕಷ್ಟಪಡುತ್ತಿರುವುದನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಒಡೆದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕುಟುಂಬ ಸದಸ್ಯರನ್ನು ರಕ್ಷಿಸಿದರು.
ನಂತರ, ಅವರನ್ನು ಖಾಸಗಿ ಮತ್ತು ನಾಗರಿಕ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಅವರೆಲ್ಲರೂ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.ಮೃತರನ್ನು 42 ವರ್ಷದ ಪ್ರವೀಣ್ ಮಿತ್ತಲ್, ಅವರ ಪೋಷಕರು, ಪತ್ನಿ ಮತ್ತು ಮೂವರು ಮಕ್ಕಳು – ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಎಂದು ಗುರುತಿಸಲಾಗಿದೆ.
ಆರಂಭಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಪ್ರಕರಣದಂತೆ ಕಂಡುಬಂದಿದೆ. ವಿಧಿವಿಜ್ಞಾನ ತಂಡವು ಸ್ಥಳಕ್ಕೆ ತಲುಪಿದೆ. ಅಪರಾಧ ಸ್ಥಳದಿಂದ ಎಲ್ಲಾ ಪುರಾವೆಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹಿಮಾದ್ರಿ ಕೌಶಿಕ್ ಹೇಳಿದ್ದಾರೆ.
ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಂಚಕುಲದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.