
ಒಂದಷ್ಟು ಕಿಡಿಯನ್ನೇ ನಿರ್ಲಕ್ಷಿಸಿದರೆ ಅದು ಬೆಂಕಿಯ ಜ್ವಾಲೆಯಾಗುತ್ತದೆ; ದಲಿತರಿಗೆ ಸೂಕ್ತ ರಕ್ಷಣೆ ನೀಡಲು ಸಚಿವ ಈಶ್ವರ್ ಖಂಡ್ರೆ ಸೂಚನೆ
ಬೀದರ್ : ಬೀದರ್ ಜಿಲ್ಲೆಯ ಕೆಲವೆಡೆ ದಲಿತ ಸಮುದಾಯದವರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಬಂದಿರುವ ವರದಿಗಳನ್ನು ನಾನು ಗಂಭೀರವಾಗಿ ಪರಿಗಣಿಸುತ್ತಿದ್ದೇನೆ. ತಕ್ಷಣವೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯು ನೊಂದವರಿಗೆ ಸೂಕ್ತ ರಕ್ಷಣೆ ನೀಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ನಾನು ಸೂಚನೆ ನೀಡಿದ್ದೇನೆ ಎಂದು ಬೀದರ್ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ .
ವಿಶ್ವಗುರು ಬಸವೇಶ್ವರರು ಕಟ್ಟಿದ್ದ ಸಮಾನತೆಯ ಸಮಾಜ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಟ್ಟಿಕೊಟ್ಟ ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರೋಧವಾಗಿರುವ ಈ ಘಟನೆಗಳು ನಮಗೆ ಬೇಸರ ತಂದಿವೆ. ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಎಲ್ಲಾ ಹಂತದ ಅಧಿಕಾರಿಗಳು ಎಚ್ಚರಿಕೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
ಖುದಾವಂದಪೂರ ಘಟನೆಗೆ ನಾನು ಖಂಡನೆ ವ್ಯಕ್ತಪಡಿಸುತ್ತಿದ್ದೇನೆ. ಬೀದರ್ ಸರ್ವ ಜನಾಂಗಗಳ ಶಾಂತಿಯ ತೋಟವಾಗಿದ್ದು, ಜಿಲ್ಲೆಯ ಸೌಹಾರ್ದತೆಗೆ ಭಂಗವುಂಟು ಮಾಡಬಾರದು. ಒಂದಷ್ಟು ಕಿಡಿಯನ್ನೇ ನಿರ್ಲಕ್ಷಿಸಿದರೆ ಅದು ಬೆಂಕಿಯ ಜ್ವಾಲೆಯಾಗುತ್ತದೆ. ಸೋದರರಂತೆ ಬದುಕೋಣ, ಶಾಂತಿಯ ಪರಿಸರವನ್ನು ಕಾಪಾಡೋಣ ಎಂದು ಜನತೆಗೆ ಮನವಿ ಮಾಡಿದ್ದಾರೆ.
ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮುಂದೆ ಇಂತಹ ಘಟನೆಗಳು ಮರುಕಳಿಸಿದರೆ, ನೇರವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯನ್ನೇ ಹೊಣೆ ಮಾಡಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದೇನೆ ಎಂದು ಅರಣ್ಯ ಹಾಗೂ ಬೀದರ್ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.