
SSLC ಫಲಿತಾಂಶ ಪ್ರಕಟ; ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ; ಈ ಬಾರಿಯೂ ಬಾಲಕಿಯರೇ ಮೇಲುಗೈ
ಬೆಂಗಳೂರು: 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 (SSLC Results) ಫಲಿತಾಂಶ ಪ್ರಕಟವಾಗಿದೆ. ಒಟ್ಟಾರೆ ಶೇ.66.14 ಫಲಿತಾಂಶ ಬಂದಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಈ ವರ್ಷ ಶೇ. 91.12ರಷ್ಟು ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಶೇ.89.96ರಷ್ಟು ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆ ದ್ವಿತೀಯ, ಶೇ. 83.19 ಫಲಿತಾಂಶದೊಂದಿಗೆ ಉತ್ತರ ಕನ್ನಡ ತೃತೀಯ, ಶೇ.82.29 ರಷ್ಟು ಫಲಿತಾಂಶದೊಂದಿಗೆ ಶಿವಮೊಗ್ಗ ನಾಲ್ಕನೇ ಸ್ಥಾನ ಹಾಗೂ ಶೇ. 42.43 ಫಲಿತಾಂಶದೊಂದಿಗೆ ಕಲಬುರಗಿ ಕೊನೆಯ ಸ್ಥಾನದಲ್ಲಿದೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ SSLC ಫಲಿತಾಂಶವನ್ನು ಪ್ರಕಟಿಸಿದ್ದು, ಇಲಾಖೆಯ ವೆಬ್ ಸೈಟ್ ಗಳಲ್ಲಿ ಫಲಿತಾಂಶಗಳನ್ನು ವೀಕ್ಷಿಸಬಹುದು.
ಒಟ್ಟು 5,24,984 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರ ಪೈಕಿ ಬಾಲಕರು 226637 (58.07%), ಬಾಲಕಿಯರು 296438 (74%) ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.
2,24,900 ಮಂದಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು (67.05%) ಹಾಗೂ 2,98,175 ಮಂದಿ ನಗರ ಭಾಗದ ವಿದ್ಯಾರ್ಥಿಗಳು (65.47%) ತೇರ್ಗಡೆಯಾಗಿದ್ದಾರೆ. ಆ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.
ಸರ್ಕಾರಿ- 329, ಅನುದಾನ- 53, ಖಾಸಗಿಯ 539 ಶಾಲೆಗಳು ಶೇ.100 ಫಲಿತಾಂಶ ಪಡೆದುಕೊಂಡಿವೆ. ಸರ್ಕಾರಿ- 6, ಅನುದಾನ-30, ಖಾಸಗಿಯ 108 ಶಾಲೆಗಳು ಶೂನ್ಯ ಸಂಪಾದನೆ ಮಾಡಿವೆ.
ಪ್ರಥಮ ಭಾಷೆ- 9573, ದ್ವೀತಿಯ ಭಾಷೆ- 7057, ತೃತೀಯ ಭಾಷೆ- 17909, ಗಣಿತ- 3262, ವಿಜ್ಞಾನ- 2451, ಸಮಾಜ ವಿಜ್ಞಾನ- 7974 ವಿದ್ಯಾರ್ಥಿಗಳು ಔಟ್ ಆಫ್ ಔಟ್ ಅಂಕವನ್ನು ಪಡೆದುಕೊಂಡಿದ್ದಾರೆ.