
ಮಂಗಳೂರು ನೂತನ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿಯಾಗಿ ಡಾ.ಅರುಣ್ ಕೆ. ನೇಮಕ; ಅನುಪಮ್ ಅಗ್ರವಾಲ್, ಯತೀಶ್ ವರ್ಗಾವಣೆ
ಮಂಗಳೂರು: ಮಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಸುಧೀರ್ ಕುಮಾರ್ ರೆಡ್ಡಿ, ದ.ಕ. ಜಿಲ್ಲಾ ಎಸ್ಪಿಯಾಗಿ ಡಾ.ಅರುಣ್ ಕೆ. ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಯತೀಶ್ ಎನ್. ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಸುಧೀರ್ ಕುಮಾರ್ ರೆಡ್ಡಿ ಇದುವರೆಗೂ ಬೇಹುಗಾರಿಕಾ ಇಲಾಖೆಯ ಡಿ ಐ ಜಿ ಆಗಿದ್ದರು. ಅವರು ವರ್ಗಾವಣೆಯಾಗಿರುವ ಅನುಪಮ್ ಅಗ್ರವಾಲ್ ಅವರ ಸ್ಥಾನಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಉಡುಪಿ ಎಸ್ಪಿಯಾದ್ದ ಡಾ.ಅರುಣ್ ಕೆ. ಅವರು ವರ್ಗಾವಣೆಯಾಗಿರುವ ಯತೀಶ್ ಎನ್. ಅವರ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿ ನೇಮಕಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದ ಅನುಪಮ್ ಅಗರ್ವಾಲ್ ಅವರನ್ನು ಸಿಐಡಿಯ ಆರ್ಥಿಕ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ. ಯತೀಶ್ ಅವರನ್ನು ವರ್ಗಾವಣೆ ಮಾಡಲಾಗಿದ್ದರೂ, ಸ್ಥಾನ ನಿಗದಿಪಡಿಸಿಲ್ಲ. ದಕ್ಷಿಣ ಕನ್ನಡಕ್ಕೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಆಗಿರುವ ಡಾ. ಅರುಣ್ ಕೆ ಅವರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆಯಲ್ಲಿದ್ದರು. ಅವರ ಸ್ಥಾನಕ್ಕೆ 2017ರ ಬ್ಯಾಚಿನ ಐಪಿಎಸ್ ಅಧಿಕಾರಿ ಹರಿರಾಮ್ ಶಂಕರ್ ಅವರನ್ನು ನಿಯೋಜಿಸಲಾಗಿದೆ.