
ಯುಎಇ ಪದ್ಮಶಾಲಿ ಸಮುದಾಯದ 16ನೇ ವರ್ಷದ ಸಂಭ್ರಮಾಚರಣೆ; ದುಬೈಯಲ್ಲಿ ಅದ್ದೂರಿಯಾಗಿ ನಡೆದ ಸತ್ಯನಾರಾಯಣ ಪೂಜೆ
ದುಬೈ: ಯುಎಇಯ ಪದ್ಮಶಾಲಿ ಸಮುದಾಯವು ತನ್ನ 16ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಪದ್ಮಶಾಲಿ ಸಮಾಜದ ಅಧ್ಯಕ್ಷ ರಘುರಾಮ್ ಶೆಟ್ಟಿಗಾರ್ ಕುಕ್ಕಿಕಟ್ಟೆ ಇವರ ನೇತೃತ್ವದಲ್ಲಿ ಸತ್ಯನಾರಾಯಣ ಪೂಜಾ ಕೈಂಕರ್ಯವನ್ನು ಬಹಳ ಅದ್ದೂರಿಯಾಗಿ ಭಕ್ತಿ ಶ್ರದ್ಧೆಗಳಿಂದ ರವಿವಾರ ದುಬೈಯ ಸಿಂಧಿ ಸರೆಮೋನಿಯಲ್ ಸೆಂಟರ್ ನಲ್ಲಿ ಆಯೋಜಿಸಿತ್ತು.
ಈ ಕಾರ್ಯಕ್ರಮವು ಬೆಳಗ್ಗೆ 10ಗಂಟೆಗೆ ಸಂಕಲ್ಪ, ಕಲಶ ಪ್ರತಿಷ್ಠಾಪನೆ, ಅಧ್ಯಕ್ಷರು ಹಾಗು ಮಹಿಳಾ ಸದಸ್ಯರಿಂದ ದೀಪ ಬೆಳಗಿಸುವುದರೊಂದಿಗೆ ಪ್ರಾರಂಭವಾಯಿತು. ಪದ್ಮಶಾಲಿಗಳ ಪರವಾಗಿ ಜಗದೀಶ್ ಶೆಟ್ಟಿಗಾರ್ ಮತ್ತು ವಿಜಯಶ್ರೀ ದಂಪತಿಗಳು ಪೂಜೆಗೆ ಕುಳಿತುಕೊಂಡಿದ್ದರು.
ಊರಿನಿಂದ ಬಂದಂತಹ ರಮಣ ತಂತ್ರಿಯವರು ಪೂಜೆಯನ್ನು ನೆರವೇರಿಸಿದರು. ರಮಣ ತಂತ್ರಿಯವರು ನೆರೆದ ಭಕ್ತಾದಿಗಳನ್ನು ಆಶೀರ್ವದಿಸಿ, ದುಬೈಯಲ್ಲಿ ಪ್ರತೀವರ್ಷ ಆಚರಿಸಿಕೊಂಡು ಬಂದಂತಹ ಶ್ರೀ ಸತ್ಯನಾರಾಯಣ ಪೂಜೆಯಿಂದಾಗಿ ಸಂಘಟನೆಯು ಸಂಘಟಿತವಾಗಿ ಅಭಿವೃದ್ಧಿ ಹೊಂದಲು ಕಾರಣವಾಗುತ್ತದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಕೊಡಲು ಪದ್ಮಶಾಲಿ ಸಮಾಜ ಭಾಂದವರಿಗೆ ಇನಷ್ಟು ಶಕ್ತಿ ಕೊಡಲಿ ಎಂದು ಶುಭ ಹಾರೈಸಿದರು.
ಪದ್ಮಶಾಲಿ ಭಜನಾ ತಂಡವು ಭಜನಾ ಕಾರ್ಯಕ್ರಮವನ್ನು ಬಹಳ ಸುಮಧುರವಾಗಿ ನಡೆಸಿಕೊಟ್ಟರು. ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷ ರಘುರಾಮ್ ಶೆಟ್ಟಿಗಾರ್ ಮಾತನಾಡಿ, ದುಬೈಯ ಸಂಘವು ನಡೆಸಿಕೊಂಡು ಬಂದಂತಹ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ವಿವರಣೆಯನ್ನು ನೀಡಿದರು. ಇಂದಿನ ಸತ್ಯನಾರಾಯಣ ಪೂಜೆಯು ಯುಎಇಯಲ್ಲಿ ನೆಲೆಸಿರುವ ಪದ್ಮಶಾಲಿ ಯುವ ಪೀಳಿಗೆಗೆ ಮತ್ತು ಮಕ್ಕಳಿಗೆ ಸನಾತನ ಧರ್ಮದ ಆಚರಣೆಯ ಬಗ್ಗೆ ತಿಳುವಳಿಕೆ ಮೂಡಿಸಲು ಅತ್ಯಂತ ಮಹತ್ವದ್ದಾಗಿದೆ, ಇದರಿಂದ ಅವರು ಆಧ್ಯಾತ್ಮಿಕ ಚಟಿವಟಿಕೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.
ಪದ್ಮಶಾಲಿ ದುಬೈ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳ ಯಶಸ್ಸಿಗೆ ಯುಎಇಯಲ್ಲಿ ನೆಲೆಸಿರುವ ಪದ್ಮಶಾಲಿ ಸದಸ್ಯರ ಸಹಕಾರವೇ ಪ್ರಾಮುಖ್ಯವಾದುದು. ಈ ಸಹಕಾರವನ್ನು ಮುಂದೆಯೂ ಮುಂದುವರಿಸಿಕೊಂಡು ಬರಬೇಕೆಂದು ಮನವಿ ಮಾಡಿದರು.
ನಂತರ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 9ನೇ ರಾಂಕ್ ಪಡೆದ ಸಂಘದ ಸದಸ್ಯರಾದ ಸದಾಶಿವ ಶೆಟ್ಟಿಗಾರ್ ಹಾಗು ಪ್ರಜ್ವಲ ಅವರ ಪುತ್ರಿ ಅನನ್ಯ ಶೆಟ್ಟಿಗಾರ್ ಅವರನ್ನು ಪುರಸ್ಕರಿಸಿ ಸನ್ಮಾನಿಸಲಾಯಿತು.
ಕೀರ್ತಿ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಅವಿನ್ ಕುಮಾರ್ ಧನ್ಯವಾದವನ್ನು ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಯುಎಇಯಲ್ಲಿರುವ ವಿವಿಧ ಸಂಘ ಸಂಸ್ಥೆಗಳ ಅದ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಗಣ್ಯರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.
ಕಾರ್ಯಕಾರಿ ಸಮಿತಿಯ ಸದಸ್ಯರಾದ ವರದ್ ರಾಜ್ ಶೆಟ್ಟಿಗಾರ್, ಅರುಂಧತಿ ಮನೋಹರ್, ಮನಿಷ್ ಪದ್ಮಶಾಲಿ ಹಾಗು ಅರವಿಂದ್ ಶೆಟ್ಟಿಗಾರ್ ವಿವಿಧ ಕಾರ್ಯಕರ್ತರ ತಂಡಗಳ ನೇತ್ರತ್ವವನ್ನು ವಹಿಸಿ ಕಾರ್ಯಕ್ರಮವು ಶಿಸ್ತು ಬದ್ಧವಾಗಿ ನಡೆಸಲು ಸಹಕರಿಸಿದರು.