ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ; ಮೊಂಟೆಪದವುನಲ್ಲಿ ಭೂಕುಸಿತದಿಂದ 3 ಮಂದಿ ಮೃತ್ಯು

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ; ಮೊಂಟೆಪದವುನಲ್ಲಿ ಭೂಕುಸಿತದಿಂದ 3 ಮಂದಿ ಮೃತ್ಯು

ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ರಾತ್ರಿ, ಮಂಗಳೂರು ಸಮೀಪದ ಮೊಂಟೆಪದವು ಹಿತ್ತಿಲುಕೋಡಿಯಲ್ಲಿ ಭಾರೀ ಮಳೆಗೆ ಎರಡು ಮನೆಗಳ ಮೇಲೆ ಗುಡ್ಡ ಕುಸಿದು ಮೂವರು ಮೃತಪಟ್ಟಿದ್ದಾರೆ. ಇಬ್ಬರು ಮೊಮ್ಮಕ್ಕಳು ಸೇರಿ ಅಜ್ಜಿ ಮೃತಪಟ್ಟಿದ್ದು, ಐದು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಮೃತರನ್ನು ಅಜ್ಜಿ ಪ್ರೇಮಾ ಪೂಜಾರಿ, ಮೊಮ್ಮಕ್ಕಳಾದ ಆರ್ಯನ್ ಮತ್ತು ಆರುಷ್​ ಎಂದು ಗುರುತಿಸಲಾಗಿದೆ.

ಭಾರೀ ಮಳೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್) ಮತ್ತು ಸ್ಥಳೀಯ ಪೊಲೀಸರು ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.

ಘಟನೆಯ ಸಮಯದಲ್ಲಿ ಮನೆಯೊಳಗಿದ್ದ ಮತ್ತೊಬ್ಬ ಮಹಿಳೆ ಸಾವನ್ನಪ್ಪಿದ್ದು, ಭೂಕುಸಿತದ ಶಬ್ದ ಕೇಳಿ ಅವರ ಮಗ ಸೀತಾರಾಮ್ ಹೊರಗೆ ಧಾವಿಸಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಯಗೊಂಡಿದ್ದ ಕಾಂತಪ್ಪ ಪೂಜಾರಿ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಸಹ ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಮಂಗಳೂರಿನ ದೇರಳಕಟ್ಟೆಯಲ್ಲಿ ಇಂದು ಬೆಳಗ್ಗೆ ಮನೆಯ ಮೇಲೆ ಕಾಂಪೌಂಡ್ ಗೋಡೆ ಕುಸಿದು ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದಳು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಭೂಕುಸಿತ ಮತ್ತು ಗೋಡೆ ಕುಸಿತದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧಿಕಾರಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಂಡು ವರದಿ ನೀಡುವಂತೆ ಸೂಚಿಸಿದ್ದಾರೆ.

ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ಗಳ ಸಿಇಒಗಳೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ ಸಿಎಂ ಈ ಸೂಚನೆಗಳನ್ನು ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article