'ನಮ್ಮ ನಾಡ ಒಕ್ಕೂಟ'ದಿಂದ ವಿವಿಧ ಸಾಧಕರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ

'ನಮ್ಮ ನಾಡ ಒಕ್ಕೂಟ'ದಿಂದ ವಿವಿಧ ಸಾಧಕರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ: 'ನಮ್ಮ ನಾಡ ಒಕ್ಕೂಟ' ಉಡುಪಿ ಜಿಲ್ಲೆ ವತಿಯಿಂದ ವೃತ್ತಿ ಮಾರ್ಗದರ್ಶನ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಶನಿವಾರ ಬ್ರಹ್ಮಾವರ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.  



ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮೂಳೂರು ಅಲ್ ಇಹ್ಸಾನ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಮೌಲಾನ ಯು.ಕೆ.ಮುಸ್ತಫ ಸಅದಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ಮಾತನಾಡಿದರು. ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ ವಹಿಸಿದ್ದರು. 






ಈ ಸಂದರ್ಭದಲ್ಲಿ ಈ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಮತ್ತು ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಮುಸ್ಲಿಮ್ ಸಮುದಾಯದ ಒಟ್ಟು 191 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅದೇ ರೀತಿ ಶೇ.100 ಫಲಿತಾಂಶ ಪಡೆದ ಉಡುಪಿ ಜಿಲ್ಲೆಯ ಮುಸ್ಲಿಮ್ ಸಮುದಾಯದ ಶಾಲೆಗಳ ಮುಖ್ಯಸ್ಥರನ್ನು ಅಭಿನಂದಿಸಲಾಯಿತು. 

ಉಚ್ಚಿಲ ಸರಸ್ವತಿ ಮಂದಿರ ಪ್ರೌಢ ಶಾಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ 595 ಅಂಕ ಗಳಿಸಿದ್ದ ಉಚ್ಚಿಲ ಕಟ್ಟಿಂಗೇರಿಯ ಸಂಶುದ್ದೀನ್ ಹಾಗು ರಹಮತ್ ದಂಪತಿ ಪುತ್ರಿ ಫಾತಿಮಾ ಶೈಫಾರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಜೊತೆಗೆ  ಶೇ.100 ಫಲಿತಾಂಶದೊಂದಿಗೆ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆಗೈದಿರುವ ಕಾಪು ಚಂದ್ರನಗರದ ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್'ನ ಪ್ರಾಂಶುಪಾಲ ಅಕ್ಬರ್ ಅಲಿ, ಉಪ ಪ್ರಾಂಶುಪಾಲ ಗುರುದತ್ತ್ ಅವರನ್ನು ಅಭಿನಂದಿಸಲಾಯಿತು. 

20 ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಮಸೀದಿಯಲ್ಲಿ ಇಮಾಮತ್ ನಿರ್ವಹಿಸುತ್ತಿರುವ 12 ಉಲೇಮಾಗಳನ್ನು ಗೌರವಿಸಲಾಯಿತು. ಸಾಧಕರಾದ ಉಡುಪಿ ಅವೆದಿಸ್ ಇನ್ಫೋಸಿಸ್ಟಮ್‌ನ ಡಿಜಿಟಲ್ ಮಾರ್ಕೇಟರ್ ಮುಅಝ್ ಮುಹಮ್ಮದ್, ಕುಂದಾಪುರ ಎನ್‌ಎನ್‌ಓ ಕಮ್ಯುನಿಟಿ ಸೆಂಟರ್‌ನ ಫಾತಿಮಾ ಮುಸ್ಕಾನ್, ಶೇಕ್ ಮುಹಮ್ಮದ್ ಫಾರ್ಮನ್ ಅವರನ್ನು ಸನ್ಮಾನಿಸಲಾಯಿತು. 

ಒಕ್ಕೂಟದ ಕೋಶಾಧಿಕಾರಿ ಪೀರು ಸಾಹೇಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಾಹೀರ್ ನಾಖುದಾ ಗಂಗೊಳ್ಳಿ, ಜಿಲ್ಲಾ ಕೋಶಾಧಿಕಾರಿ ನಕ್ವಾ ಯಾಹ್ಯ ಮಲ್ಪೆ, ಉಡುಪಿ ತಾಲೂಕು ಅಧ್ಯಕ್ಷ ನಝೀರ್ ನೇಜಾರು, ಕುಂದಾಪುರ ತಾಲೂಕು ಅಧ್ಯಕ್ಷ ಎಸ್.ದಸ್ತಗೀರ್ ಕಂಡ್ಲೂರು, ಬ್ರಹ್ಮಾವರ ಅಧ್ಯಕ್ಷ ತಾಜುದ್ದೀನ್ ಇಬ್ರಾಹಿಂ, ಕಾಪು ಅಧ್ಯಕ್ಷ ಅಶ್ರಫ್ ಪಡುಬಿದ್ರೆ, ಕಾರ್ಕಳ ಅಧ್ಯಕ್ಷ ಶಾಕೀರ್ ಹುಸೇನ್ ಶಿಷಾ, ಹೆಬ್ರಿ ಅಧ್ಯಕ್ಷ ಮುಹಮ್ಮದ್ ರಫೀಕ್ ಅಜೆಕಾರು ಉಪಸ್ಥಿತರಿದ್ದರು. 

ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಹುಸೈನ್ ಹೈಕಾಡಿ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕ ಮೌ ಲಾನ ಝಮೀರ್ ಅಹ್ಮದ್ ರಶದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಫಾಝಿಲ್ ಆದಿಉಡುಪಿ ವಂದಿಸಿದರು. ಫಝಲ್ ನೆರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನಾ ಶೈಕ್ಷಣಿಕ ಮಾರ್ಗದರ್ಶಕ ಮಾಸ್ಟರ್ ರಫೀಕ್ ಮಂಗಳೂರು, ವಕೀಲ ಸುಹಾನ್ ಸಾಸ್ತಾನ, ಶಿವಮೊಗ್ಗ ಮಲನಾಡ್ ಲೈಫ್‌ಲೈನ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಇರ್ಫಾನ್ ಅಹ್ಮದ್ ವೃತ್ತಿ ಮಾರ್ಗದರ್ಶನ ನೀಡಿದರು.

Ads on article

Advertise in articles 1

advertising articles 2

Advertise under the article