
ಆಶೀರ್ವಾದದ ನೆಪದಲ್ಲಿ ನನ್ನ ಬಟ್ಟೆಯೊಳಗೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ ಅರ್ಚಕ: ಮಾಡೆಲ್‌ನಿಂದ ಲೈಂಗಿಕ ದೌರ್ಜನ್ಯ ಆರೋಪ
ಕೌಲಾಲಂಪುರ್: ಆಶೀರ್ವಾದ ಮಾಡುವ ನೆಪದಲ್ಲಿ ಮಾಡೆಲ್ ಬ್ಲೌಸ್ ಒಳಗೆ ಕೈಹಾಕಿ ಹಿಂದೂ ಅರ್ಚಕನೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಮಲೇಷ್ಯಾದ ಸೆಪಾಂಗ್‌ನಲ್ಲಿರುವ ಮಾರಿಯಮ್ಮನ್ ದೇವಸ್ಥಾನದಲ್ಲಿ ನಡೆದಿದೆ.
ಈ ಕುರಿತು ಮಾಡೆಲ್ ಲಿಶಲ್ಲಿನಿ ಕನರನ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ತಮ್ಮ ಮೇಲೆ ಆದ ದೌರ್ಜನ್ಯದ ಕುರಿತು ವಿವರಿಸಿದ್ದಾರೆ. ನನ್ನ ಅಮ್ಮ ಮಲೇಷ್ಯಾದಲ್ಲಿರಲಿಲ್ಲ, ಭಾರತಕ್ಕೆ ತೆರಳಿದ್ದರು. ಹೀಗಾಗಿ ಜೂ.21ರಂದು ನಾನು ಯಾವಾಗಲೂ ಹೋಗುತ್ತಿದ್ದ ದೇವಸ್ಥಾನವೊಂದಕ್ಕೆ ತೆರಳಿದ್ದೆ. ಭಕ್ತಿ, ದೇವರು ಇದೆಲ್ಲದಕ್ಕೂ ನಾನು ಹೊಸಬಳು. ಆದರೆ ಈ ದೇವಸ್ಥಾನಕ್ಕೆ ತೆರಳಲು ಪ್ರಾರಂಭಿಸಿದಾಗಲಿಂದಲೂ ನನಗೆ ಈ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದ ಅರ್ಚಕರು ನಿಂತಿದ್ದರು.
ನಾನು ದೇವರಿಗೆ ನಮಸ್ಕರಿಸುತ್ತಿದ್ದೆ. ಆಗ ಆ ಅರ್ಚಕರು ಅಲ್ಲಿಗೆ ಬಂದು ನನ್ನ ಬಳಿ ಪವಿತ್ರ ನೀರಿದೆ, ಜೊತೆಗೆ ಒಂದು ದಾರವಿದೆ, ಅದನ್ನು ನಿನಗೆ ಕೊಡುತ್ತೇನೆ, ಅದು ನಿನಗೆ ಆರ್ಶೀವಾದದ ರೀತಿ ಎಂದು ಹೇಳಿ ಹೋದರು. ನಾನು ದೇವರ ಪಾರ್ಥನೆಯ ಬಳಿಕ ಅರ್ಚಕರ ಬಳಿಗೆ ಹೋದೆ. ಆದರೆ ಆ ದಿನ ಶನಿವಾರವಾಗಿದ್ದರಿಂದ ದೇವಸ್ಥಾನದಲ್ಲಿ ಜನ ಜಾಸ್ತಿಯಿದ್ದರು. ಹೀಗಾಗಿ ಸ್ವಲ್ಪ ಹೊತ್ತು ಕಾಯುವಂತೆ ಸೂಚಿಸಿದರು.
ಅವರ ಸೂಚನೆಯಂತೆ ನಾನು ಒಂದೂವರೆ ಗಂಟೆಗಿಂತಲೂ ಹೆಚ್ಚು ಕಾಲ ಕಾಯುತ್ತಿದ್ದೆ. ಅದಾದ ಬಳಿಕ ಬಂದು ನನ್ನನ್ನು ಹಿಂಬಾಲಿಸಿಕೊಂಡು ಬಾ ಎಂದು ಹೇಳಿದರು. ಆದರೆ ನನಗೆ ಏನೋ ಸರಿಯಿಲ್ಲ ಎಂದು ಭಾಸವಾಯಿತು. ಹಾಗೆಯೇ ಹೋದೆ. ಅವರ ಕಚೇರಿಗೆ ಕರೆದುಕೊಂಡು ಹೋಗಿ, ಕುಳಿತುಕೊಳ್ಳಲು ಸೂಚಿಸಿದರು. ಆಗ ನನ್ನ ಮುಖದ ಮೇಲೆ ನೀರನ್ನು ಚುಮುಕಿಸಿದರು. ಅದು ಗುಲಾಬಿ ಹೂವಿನ ಸುಗಂಧ ಹಾಗೂ ಗಾಢವಾದ ಒಂದು ರೀತಿಯ ವಿಚಿತ್ರ ಸುವಾಸನೆಯನ್ನು ಬೀರುತ್ತಿತ್ತು. ಇದನ್ನು ಭಾರತದಿಂದ ತರಿಸಿದ್ದು, ಇದನ್ನು ಸಾಮಾನ್ಯ ಜನರಿಗೆ ನೀಡುವುದಿಲ್ಲ ಎಂದು ಹೇಳಿ ಮತ್ತೆ ಚುಮುಕಿಸಿದ್ದಕ್ಕೆ ಕಣ್ಣು ತೆರೆಯಲು ಸಾಧ್ಯವಾಗಲಿಲ್ಲ. ಬಳಿಕ ಧರಿಸಿದ್ದ ಬಟ್ಟೆ ತೆಗೆಯುವಂತೆ ಸೂಚಿಸಿದರು. ಆಗ ನಾನು ಅದು ತುಂಬಾ ಬಿಗಿಯಾಗಿದೆ, ತೆಗೆಯಲು ಆಗುವುದಿಲ್ಲ ಎಂದು ಹೇಳಿದೆ. ಆಗ ನನನ್ನು ಗದರಿಸಿ ಅಷ್ಟೊಂದು ಬಿಗಿ ಬಟ್ಟೆ ಧರಿಸಬಾರದು ಎಂದು ಹೇಳಿ ಹಿಂದೆ ಬಂದು ನಿಂತುಕೊಂಡರು. ಆಗ ತಕ್ಷಣವೇ ಏನೋ ಗೊಣುಗುತ್ತಾ, ನನ್ನ ಬ್ಲೌಸ್ ಒಳಗೆ ಕೈಹಾಕಿ ಅನುಚಿತವಾಗಿ ಮುಟ್ಟಲು ಆರಂಭಿಸಿದ. ನನಗೆ ಅಲ್ಲಿಂದ ಎದ್ದು ಹೋಗಲು ಸಾಧ್ಯವಾಗದೇ, ಮಾತನಾಡಲು ಆಗದೇ ತಟಸ್ಥಳಾಗಿ ನಿಂತುಬಿಟ್ಟೆ.
ಆಗ ಅವನು, ನಾನು ದೇವರ ಸೇವೆ ಮಾಡುತ್ತೇನೆ. ನೀನು ಈ ರೀತಿ ನನ್ನ ಜೊತೆ ಮಾಡಿದರೆ ನಿನಗೆ ಆರ್ಶೀವಾದ ದೊರೆಯುತ್ತದೆ. ಜೊತೆಗೆ ಈ ವಾರ ನಿನಗೆ ತುಂಬಾ ಅದೃಷ್ಟಕರ ವಾರವಾಗಿರಲಿದೆ ಎಂದು ಹೇಳಿದ. ಈ ಘಟನೆ ನಡೆದ ಕೆಲವು ದಿನಗಳ ಕಾಲ ನಾನು ಆಘಾತದಲ್ಲಿದ್ದೆ. ನನಗೆ ಅರ್ಚಕನೊಬ್ಬ ಲೈಂಗಿಕ ದೌರ್ಜನ್ಯ ನೀಡಿದ ಎಂಬುವುದನ್ನು ನಂಬಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ ಜು.4ರಂದು ನಾನು ನಡೆದ ವಿಷಯವನ್ನು ಅಮ್ಮನಿಗೆ ತಿಳಿಸಿದೆ. ಅದೇ ದಿನ ಪೊಲೀಸರಲ ಬಳಿ ದೂರು ದಾಖಲಿಸಿದೆ.
ಪೊಲೀಸರು ದೇವಸ್ಥಾನಕ್ಕೆ ತೆರಳಿದಾಗ ಅರ್ಚಕ ಪರಾರಿಯಾಗಿದ್ದ. ಸದ್ಯ ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದು, ದೇವಸ್ಥಾನ ಮಂಡಳಿಯುವರು ತಮ್ಮ ದೇವಸ್ಥಾನದ ಹೆಸರುಳಿಸಲು ಪ್ರಯತ್ನ ಪಡುತ್ತಿದ್ದಾರೆ. ಹೀಗಾಗಿ ಪೊಲೀಸರು ನೀನು ಈ ಕುರಿತು ಎಲ್ಲಿಯೂ ಪ್ರಚಾರ ಮಾಡಬೇಡ. ನೀನು ಹಾಗೇ ಮಾಡಿದರೆ ಅದು ನಿನ್ನ ತಪ್ಪು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.