
ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಿಸುವುದಿದ್ದರೆ ತುಳುನಾಡು ಎಂದಾಗಲಿ: ಪುರುಷೋತ್ತಮ ಬಿಳಿಮಲೆ
ಕಾರವಾರ : ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಎಂದು ಯಾಕೆ ಇಡಬೇಕು, ಬದಲಿಸುವುದಾದರೇ ತುಳುನಾಡು ಎಂದು ಬದಲಿಸಲಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಅವರು, ಐತಿಹಾಸಿಕ ಸ್ಥಳದ ಹೆಸರನ್ನು ಯಾರು ಕೂಡ ಬದಲಿಸಬಾರದು. ಹೊಸ ಜಿಲ್ಲೆಯನ್ನು ಮಾಡುವುದಾದರೇ ಯಾವ ಹೆಸರನ್ನಾದರೂ ಇಡಲಿ. ಕನ್ನಡ ಎಂದಿದ್ದಕ್ಕೆ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಕಾಸರಗೋಡು ಕರ್ನಾಟಕದಿಂದ ಬೇರೆ ಆಯಿತು. ತುಳುನಾಡು ಎಂದು ಇಟ್ಟಿದ್ದರೆ ಕಾಸರಗೋಡು ಬೇರೆಯಾಗಿರುತ್ತಿರಲಿಲ್ಲ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಗಡಿ ನಾಡು ಉತ್ಸವ ಮಾಡಲಾಗುವುದು. ಕನ್ನಡ ಹೊರತು ಪಡಿಸಿ ಅನ್ಯ ಭಾಷಿಕರ ಸಂಖ್ಯೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿದೆ. ಬೇರೆ ರಾಜ್ಯಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.
36 ಗಂಟೆಯಲ್ಲಿ ಕನ್ನಡ ಕಲಿಯುವ ಯೋಜನೆ ರೂಪಿಸಿದ್ದೇವೆ. ಈಗಾಗಲೇ ಬೆಂಗಳೂರಿನಲ್ಲಿ 22 ಕಡೆ ಕನ್ನಡ ಕಲಿಕಾ ಕೇಂದ್ರ ಆರಂಭಿಸಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಕನ್ನಡದ ಐತಿಹಾಸಿಕ ಕುರುಹು ಇವೆ. ಐತಿಹಾಸಿಕ ಸ್ಥಳಗಳ ಕುರಿತು ಸಾರ್ವಜನಿಕರಿಗೆ ತಿಳಿಯುವಂತೆ ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಾಗಿ ಬಹಳ ವರ್ಷ ಕಳೆದಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯಲ್ಲಿ ಮಾಡಲು ನಾವು ಆಗ್ರಹ ಮಾಡುತ್ತೇವೆ ಎಂದರು.
10ನೇ ತರಗತಿಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಫೇಲಾದವರು ಮಂಡ್ಯ, ಮೈಸೂರು ಭಾಗದವರೇ ಹೆಚ್ಚು. ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆ ಮಾತು ಕನ್ನಡ ಇರದೆ ಇದ್ದರೂ ಕನ್ನಡ ಭಾಷೆಯಲ್ಲಿ ಮಕ್ಕಳ ಪಾಸ್ ಆಗಿರುವ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕನ್ನಡ ಲಿಪಿಯ ಫಾಂಟ್ ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ .ಎ.ಐ ತಂತ್ರಜ್ಞಾನದ ಅನ್ಯ ಭಾಷೆಯಿಂದ ಕನ್ನಡಕ್ಕೆ ಭಾಷಾಂತರದ ಆಪ್ ಸಹ ಅಭಿವೃದ್ಧಿ ಮಾಡಲಾಗುತಿದ್ದು ನವೆಂಬರ್‌ನಲ್ಲಿ ಬಿಡುಗಡೆ ಮಾಡುತ್ತೇವೆ. ಬ್ಯಾಂಕ್ ಸಿಬ್ಬಂದಿ ಕನ್ನಡ ಮಾತನಾಡದಿರುವುದರಿಂದ ರಾಜ್ಯದಲ್ಲಿ 6 ಎಫ್‌ಐಆರ್ ದಾಖಲುಮಾಡಲಾಗಿದೆ ಎಂದು ಅವರು ಹೇಳಿದರು.