ಆ.1ರಿಂದ ಸೆ.17ರವರೆಗೆ ಉಡುಪಿ ಕೃಷ್ಣಮಠದಲ್ಲಿ ‘ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ’; ನಾಳೆ (ಜುಲೈ 25) ರಾಜ್ಯಪಾಲರಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ ಉದ್ಘಾಟನೆ

ಆ.1ರಿಂದ ಸೆ.17ರವರೆಗೆ ಉಡುಪಿ ಕೃಷ್ಣಮಠದಲ್ಲಿ ‘ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ’; ನಾಳೆ (ಜುಲೈ 25) ರಾಜ್ಯಪಾಲರಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ ಉದ್ಘಾಟನೆ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪರ್ಯಾಯ ಶ್ರೀಪುತ್ತಿಗೆ ಮಠದ ವತಿಯಿಂದ ಆಗಸ್ಟ್ 1ರಿಂದ ಸೆಪ್ಟೆಂಬರ್ 17ರವರೆಗೆ 48 ದಿನಗಳ ಕಾಲ ‘ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ’ವನ್ನು ಹಮ್ಮಿಕೊಳ್ಳಲಾಗಿದ್ದು, ಜು.25ರಂದು ಸಂಜೆ 4.30ಕ್ಕೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಮಂಡಲೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ತಿಳಿಸಿದ್ದಾರೆ.

ಕೃಷ್ಣ ಮಠದ ಗೀತಾಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡಲೋತ್ಸವದ ಸಮಾರೋಪ ಸಮಾರಂಭ ಸೆಪ್ಟೆಂಬರ್ 14ರಂದು ಸೌರ ಕೃಷ್ಣ ಜನ್ಮಾಷ್ಟಮಿಯ ದಿನದಂದು ನಡೆಯಲಿದ್ದು, ಇದರಲ್ಲಿ ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್.ರವಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅವರು ಅಂದು ರಾತ್ರಿ ನಡೆಯುವ ವಿಶೇಷ ಪೂಜೆ ಹಾಗೂ ಅರ್ಘ್ಯ ಪ್ರದಾನದ ವೇಳೆ ಉಪಸ್ಥಿತರಿರುವರು ಎಂದು ಸ್ವಾಮೀಜಿ ತಿಳಿಸಿದರು.

ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ವಿವಿಧ ಕಾರ್ಯಕ್ರಮಗಳು ಆಗಸ್ಟ್ 1ರಿಂದ ಆರಂಭಗೊಳ್ಳಲಿದೆ. ಮುಂದಿನ 48 ದಿನಗಳ ಅವಧಿಯಲ್ಲಿ ಚಾಂದ್ರ ಕೃಷ್ಣ ಜನ್ಮಾಷ್ಟಮಿ (ಆ.15) ಹಾಗೂ ಸೌರ ಕೃಷ್ಣ ಜನ್ಮಾಷ್ಟಮಿ (ಸೆ.14 ಕೃಷ್ಣ ಜಯಂತಿ, ಸೆ.16 ಶ್ರೀಕೃಷ್ಣ ಲೀಲೋತ್ಸವ, ಮೊಸರು ಕುಡಿಕೆ)ಯನ್ನು ಆಚರಿಸಲಾಗುತ್ತಿದೆ. ಇದರೊಂದಿಗೆ 48 ದಿನಗಳ ಕಾಲವೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳು, ಭಜನಾ ಕಮ್ಮಟ, ಧಾರ್ಮಿಕ ಪ್ರವಚನ, ವಿಚಾರ ಸಂಕಿರಣ, ನಾಟಕ, ಸಂಗೀತ ಕಚೇರಿ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ. ಚಾಂದ್ರ ಕೃಷ್ಣ ಜನ್ಮಾಷ್ಟಮಿಯ ವೇಳೆ ಆ.14ರಂದು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಶ್ರೀಗೋವಿಂದದೇವ್ ಗಿರಿ ಮಹಾರಾಜ್ ಉಪಸ್ಥಿತರಿರುವರು ಎಂದರು.

ಸೆ.14ರಂದು ನಡೆಯುವ ಸೌರ ಕೃಷ್ಣ ಜನ್ಮಾಷ್ಟಮಿ ವೇಳೆ ಮುದ್ದುಕೃಷ್ಣ ಸ್ಪರ್ಧೆ ನಡೆಯಲಿದೆ. ಮರುದಿನ ಕೃಷ್ಣ ಲೀಲೋತ್ಸವ ಸಂದರ್ಭದಲ್ಲಿ ಆಕರ್ಷಕ ರಥೋತ್ಸವ, ಹುಲಿವೇಷ ಕುಣಿತ, ಸ್ಪರ್ಧೆ, ಮುಂಬಯಿಯ ಅಲಾರೆ ತಂಡದಿಂದ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮಗಳಿರುತ್ತವೆ. 16ರಂದು ವಿವಿಧ ಸ್ಪರ್ಧೆ ಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದ್ದು, ಸೆ.17ರಂದು ಮಂಡಲೋತ್ಸವ ಸಮಾರೋಪಗೊಳ್ಳಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪುತ್ತಿಗೆ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ, ಮಠದ ದಿವಾನ ರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ರಮೇಶ್ ಭಟ್ ಮುಂತಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article