ಮಾದಕ ವಸ್ತು ಮಾರಾಟಕ್ಕೆ ಯತ್ನ; ಐದು ಮಂದಿ ಡ್ರಗ್ಸ್‌ ಪೆಡ್ಲರ್‌ಗಳ ಬಂಧನ

ಮಾದಕ ವಸ್ತು ಮಾರಾಟಕ್ಕೆ ಯತ್ನ; ಐದು ಮಂದಿ ಡ್ರಗ್ಸ್‌ ಪೆಡ್ಲರ್‌ಗಳ ಬಂಧನ

ಮಂಗಳೂರು: ನಗರ ಹೊರವಲಯದ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸೆನ್ ಠಾಣೆಯ ಪೊಲೀಸರು ಬುಧವಾರ ದಾಳಿ ಮಾಡಿ ಐವರು ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.

ನಗರದ ಬಿಕರ್ನಕಟ್ಟೆಯ ಅಡು ಮರೋಳಿ ನಿವಾಸಿ ತುಷಾರ್ ಸೋನು (21), ನಾಗುರಿಯ ಧನ್ವಿ ಶೆಟ್ಟಿ (20), ಜಲ್ಲಿಗುಡ್ಡೆಯ ಸಾಗರ್ ಕರ್ಕೇರಾ (19), ಶಕ್ತಿನಗರದ ವಿಕಾಸ್ ಥಾಪ ಪುಚ್ಚಿ (23), ಅಳಕೆ ಕಂಡೆಟ್ಟು ಎಂಬಲ್ಲಿನ ವಿಘ್ನೇಶ್ ಕಾಮತ್ (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ 5.759 ಕೆ.ಜಿ. ತೂಕದ 5,20,000 ರೂ. ಮೌಲ್ಯದ ನಿಷೇಧಿತ ಗಾಂಜಾ ಮತ್ತು ಆರೋಪಿತರು ಕೃತ್ಯಕ್ಕೆ ಬಳಸಿದ 6 ಮೊಬೈಲ್ ಫೋನ್, 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳ ಲಾಗಿದೆ. ಇವರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಗರದಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ (ಪೆಡ್ಲರ್) ಮಾಡುವವರಾಗಿರುತ್ತಾರೆ. ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೆಟ್‌ ಗಳಲ್ಲಿ ಪ್ಯಾಕ್ ಮಾಡಿ ಪ್ರತಿ ಗಾಂಜಾ ಪ್ಯಾಕೇಟ್‌ಗೆ 1,000 ರೂ.ನಂತೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಆರೋಪಿಗಳಿಗೆ ಎಲ್ಲಿಂದ ಗಾಂಜಾ ಪೂರೈಕೆಯಾಗುತ್ತಿದೆ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ. ಆರೋಪಿಗಳ ವಿರುದ್ಧ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

200 ಮಂದಿಗೆ ಮಾದಕ ವಸ್ತು ಪೂರೈಕೆ: ಪೊಲೀಸ್ ಕಮಿಷನರ್

ಮಂಗಳೂರು: ನಗರ ಮತ್ತು ಸುತ್ತಮುತ್ತಲಿನ ಸುಮಾರು 200 ಮಂದಿ ವಿದ್ಯಾರ್ಥಿಗಳು, ಉದ್ಯೋಗಿಗಳು, ಸಾರ್ವಜನಿಕರಿಗೆ 5 ಮಂದಿ ಆರೋಪಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಇವರನ್ನು ಬಂಧಿಸದೇ ಇದ್ದಲ್ಲಿ ಮತ್ತಷ್ಟು ಮಂದಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದರು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ನನ್ನ ಬಳಿ ಬಂದ ವ್ಯಕ್ತಿಯೊಬ್ಬರು ತನ್ನ ಮಗ ಮಾದಕ ವ್ಯಸನಿಯಾಗಿರುವ ಬಗ್ಗೆ ನೊಂದು ಹೇಳಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಪರಿಶೀಲನೆಗೆ ಸೆನ್ ತಂಡವನ್ನು ರಚಿಸಿ ತನಿಖೆ ನಡೆಸಲಾಯಿತು. ಆ ತಂಡ ನಾನಾ ಆಯಾಮಗಳಲ್ಲಿ ತನಿಖೆ ನಡೆಸಿ 5 ಮಂದಿಯನ್ನು ಬಂಧಿಸಿದೆ. ಒಬ್ಬ ಪೋಷಕರು ದೂರು ನೀಡಿದ ಕಾರಣ ಕನಿಷ್ಟ 200 ಮಂದಿಗೆ ಡ್ರಗ್ಸ್ ಸರಬರಾಜು ನಿಂತಿದೆ. ಈ ರೀತಿ ಸಾರ್ವಜನಿಕರು ಡ್ರಗ್ಸ್ ಬಗ್ಗೆ ಸಮರ್ಪಕ ಮಾಹಿತಿ ನೀಡಿದರೆ ಈ ಜಿಲ್ಲೆಯನ್ನು ಡ್ರಗ್ಸ್ ಮುಕ್ತಗೊಳಿಸಲು ಸಾಧ್ಯವಿದೆ. ಡ್ರಗ್ಸ್ ಮುಕ್ತಗೊಳಿಸಲು ಪೊಲೀಸರ ಜತೆ ಎಲ್ಲರೂ ಸಹಕರಿಸಬೇಕು ಎಂದು ಸುಧೀರ್ ಕುಮಾರ್ ರೆಡ್ಡಿ ಮನವಿ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article