
ಯುಎಇಯಲ್ಲಿ ಯಕ್ಷಗಾನಕ್ಕೆ ಕೊಡುಗೆ ನೀಡುತ್ತಿರುವ ದಿನೇಶ್ ಶೆಟ್ಟಿ ಕೊಟ್ಟಿಂಜರಿಗೆ ಸನ್ಮಾನ
ದುಬೈ: ಗಲ್ಫ್ ರಾಷ್ಟ್ರದ ಏಕೈಕ ಮತ್ತು ಸರ್ವಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಕೇಂದ್ರ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ಸಂಚಾಲಕರಾದ ಯುವ ಸಂಘಟನಾ ಚತುರ ದಿನೇಶ್ ಶೆಟ್ಟಿ ಕೊಟ್ಟಿಂಜರವರನ್ನು ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಳೆದ ಹತ್ತು ವರ್ಷಗಳಿಂದ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕತ್ವವನ್ನು ವಹಿಸಿ, ನಡೆಸಿಕೊಂಡು ಬರುತ್ತಿರುವ ದೈವಭಕ್ತರು ನಿಸ್ವಾರ್ಥಿ ದಿನೇಶ್ ಶೆಟ್ಟಿ ಕೊಟ್ಟಿಂಜ ದಂಪತಿಗಳನ್ನು ಅವರ ಅಭಿಮಾನಿಗಳು, ಕೇಂದ್ರದ ದಶಮಾನೋತ್ಸವ ಮತ್ತು ದುಬಾಯಿ ಯಕ್ಷೋತ್ಸವ 2025, ಸಮಾರಂಭದ ವೇದಿಕೆಯಲ್ಲಿ, ಗಣ್ಯರ ಸಮಕ್ಷ, ಸನ್ಮಾನಿಸಿ ಗೌರವಿಸಲಾಯಿತು.
ಕೊಟ್ಟಿಂಜರವರ ಕಿರು ಪರಿಚಯ
ಶ್ರೀ ಕಟೀಲು ಮಾತೆಯ ಭಕ್ತರಾದ ಕೊಟ್ಟಿಂಜರವರು ಈ ಮರುಭೂಮಿಗೆ ಬಂದು ಕಲಾಪ್ರೀತಿ, ಪ್ರೀತಿಯ ಯಕ್ಷಗಾನಕ್ಕೆ ತನ್ನಿಂದ ಕೊಡುಗೆ ಬೇಕೆಂದು ಆಶಿಸುವ ಇವರ ಸಂಚಾಲಕತ್ವದಲ್ಲಿ "ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ", ಚಾಲನೆಗೊಂಡು ಬಹು ಆಯಾಮಗಳನ್ನು ಹೊಂದಿ ಮುಂದುವರಿಯುತ್ತಿದೆ. ಇನ್ನಷ್ಟು ಕಲೆ- ಕಲಾವಿದರ ಸಂಬಂಧಿ ಯೋಜನೆಗಳತ್ತ ಚಿತ್ತ ನೆಟ್ಟವರು.
1971ನೇ ಇಸವಿ ಜುಲೈ 1 ರಂದು ಕೊಟ್ಟಿಂಜ ತಿಮ್ಮಪ್ಪ ಶೆಟ್ಟಿ ಮತ್ತು ಸೀತ ಶೆಟ್ಟಿ ಮಗನಾಗಿ ಹುಟ್ಟಿದ ದಿನೇಶ ಶೆಟ್ಟಿಯವರು ತಮ್ಮ ಬಿ.ಕಾಂ.ವ್ಯಾಸಂಗ ಪೂರೈಸಿ, 2000ನೆ ಇಸವಿಯಲ್ಲಿ ಉದ್ಯೋಗ ನಿಮಿತ್ತ ದುಬೈಗೆ ಬಂದರು. ಹಂತ ಹಂತವಾಗಿ ಬೆಳವಣಿಗೆ ಸಾಧಿಸಿದ ಶೆಟ್ಟರು ಈಗ ತನ್ನದೇ ಪಾಲುದಾರಿಕೆಯ ಡುಮೆಕ್ ಎಂಬ ಇಂಜಿನಿಯರಿಂಗ್ ಸಂಸ್ಥೆ ಸ್ಥಾಪಿಸಿ ವೈಯಕ್ತಿಕ ಬೆಳವಣಿಗೆಯ ಜೊತೆ ಅನೇಕರಿಗೆ ಉದ್ಯೋಗದಾತರೂ ಆಗಿದ್ದಾರೆ.
ಸ್ವತಃ ತನ್ನ ಒಬ್ಬಳು ಮಗಳು, ಮತ್ತೊಬ್ಬ ಮಗನನ್ನೂ ಯಕ್ಷಗಾನ ಕಲಾವಿದರಾಗಿ ಬೆಳೆಸಿದ ಅವರು, ಇಂತಹ ಅವಕಾಶ ದುಬೈಯ ಉಳಿದ ಯಕ್ಷಗಾನಾಸಕ್ತ ಮಕ್ಕಳಿಗೂ ಲಭಿಸಬೇಕೆಂದು, 19-06-2015ರ ಶುಭದಿನದಂದು " ಯಕ್ಷಗಾನ ಅಭ್ಯಾಸ ತರಗತಿ" ಯ ಉದಯಕ್ಕೆ ಕಾರಣರಾದರು. ಬೆಳೆಸಿದರು ಮುನ್ನಡೆಸಿದರು. ಈ ಸಂಸ್ಥೆಯೇ ಈಗ “ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ.” ಎಂದು ಮರುನಾಮಕರಣಗೊಂಡಿದೆ. 15-02-2023ರಂದು ಮರುನಾಮಕರಣ ಮಾಡಿ ಸಂಸ್ಥೆಯ ನೂತನ ಲಾಂಛನ ಬಿಡುಗಡೆ ಮಾಡಲಾಯಿತು. ಇವರ ನಿವಾಸದಲ್ಲಿಯೇ ಬಹಳಷ್ಟು ಕಾಲ ಅಭ್ಯಾಸ ಕೇಂದ್ರದ ಬಗೆಬಗೆಯ ತರಗತಿಗಳು ಸಂಪನ್ನಗೊಳ್ಳುತ್ತಿದ್ದವು. ಆ ಬಳಿಕ ಮಕ್ಕಳ ಸಂಖ್ಯೆ ಹೆಚ್ಚಾದಂತೆ ಸುಸಜ್ಜಿತ ವ್ಯವಸ್ಥೆಗಳಿಗಾಗಿ ಬೇರೆಡೆಗೆ ಸ್ಥಳಾಂತರ ಮಾಡಲಾಯಿತು. 2016ರಲ್ಲಿ ವರಮಹಾಲಕ್ಷ್ಮೀ ಪೂಜಾ ವೇದಿಕೆಯಲ್ಲಿ ಮಕ್ಕಳು ಮತ್ತು ಮಹಿಳೆಯರಿಂದ ಪ್ರದರ್ಶನ ಗೊಂಡ " ಪಾಂಚಜನ್ಯ" ಪ್ರಸಂಗ ಶೆಟ್ಟರ ಸಂಘಟನಾ ಚಾತುರ್ಯಕ್ಕೆ ಕೈಗನ್ನಡಿಯಾಯ್ತು
2017 ರಲ್ಲಿ ತಂಡದ ಗುರುಗಳೂ ನಿರ್ದೇಶಕರಾದ ಶೇಖರ್ ಡಿ.ಶೆಟ್ಟಿಗಾರರಿಗೆ ಅಬುದಾಭಿ ಕರ್ನಾಟಕ ಸಂಘದವರು " ಡಾ. ದ.ರಾ.ಬೇಂದ್ರೆ ಪ್ರಶಸ್ತಿ " ಕೊಟ್ಟು ಗೌರವಿಸಿದ ಅದೇ ಸುಸಂದರ್ಭದಲ್ಲಿ ಮಕ್ಕಳ ತಂಡದ ಪೂರ್ವ ರಂಗ ಸಹಿತ ಶರಸೇತು ಬಂಧನ ಪ್ರದರ್ಶನ ಗೊಂಡಿತು. ಬಹು ಜನರ ಅಪೇಕ್ಚೆಯಂತೆ ಅದರ ಮರುಪ್ರದರ್ಶನ ಶಾರ್ಜ ಕನ್ನಡ ಸಂಘದಲ್ಲಿಯೂ ಅವರ ಮುಂದಾಳತ್ವ ದಲ್ಲಿ ಸಂಘಟಿಸಲ್ಪಟ್ಟಿತು. ಹುಟ್ಟೂರಿನಲ್ಲಿ ತನ್ನಿಬ್ಬರು ಮಕ್ಕಳು ಅದಿತಿ ಮತ್ತು ಆದಿತ್ಯ ರಿಂದಲೇ " ಶ್ರೀಕೃಷ್ಣ ಲೀಲೆ" ಎಂಬ ಕೃಷ್ಣಜನ್ಮದಿಂದ ತೊಡಗಿ ಕಂಸವಧೆಯ ತನಕ ಯಕ್ಷರೂಪಕವಾಗಿ ಪ್ರದರ್ಶಿಸಿದರು. ಅಡ್ಯಾರ್ ಗಾರ್ಡನ್ ನಲ್ಲಿ ನಡೆದ 2018 ರ ಪಟ್ಲಸಂಭ್ರಮ ದಲ್ಲಿ ದುಬೈಯ ಮಕ್ಕಳ ತಂಡ " ಮೋಹಿನೀ ಏಕಾದಶಿ" ಪ್ರಸಂಗ ಪ್ರದರ್ಶಿಸಿ ಜನಮೆಚ್ಚುಗೆ ಪಡೆಯಿತು. ಇದರ ನೇತೃತ್ವ ವಹಿಸಿದ ಶೆಟ್ಟರು ಧನ್ಯತೆ ಅನುಭವಿಸಿದರು.
2017ರಲ್ಲಿ " ಸಾಧನಾ ಸಂಭ್ರಮ 2017” ಎಂಬ ವಿನೂತನ ಪ್ರಯೋಗ ಮತ್ತು “ಪಟ್ಲ ಸಂಭ್ರಮ 2019” ಸಂಯೋಜಿಸುವ ಮೂಲಕ ದುಬಾಯಿಯಲ್ಲಿ “ಯಕ್ಷಗಾನ ಅಭ್ಯಾಸ ಕೇಂದ್ರ” ಸಂಸ್ಥೆಯ ಹೆಸರು ಮನೆಮಾತಾಯಿತು. ಪೂರ್ಣ ಪ್ರಮಾಣದ ಪ್ರದರ್ಶನ ಕೊಡುವಷ್ಟು ಸಂಖ್ಯೆ ಮತ್ತು ಕೌಶಲ್ಯ ಹೊಂದಿದ ಪ್ರತಿಭಾವಂತ ಮಕ್ಕಳ ತಂಡವೇ ಸಿದ್ಧ ವಾಯಿತು.
ಯಕ್ಷಧ್ರುವ ಪಟ್ಲ ಪೌಂಡೇಷನ್ ಇದರ ದುಬಾಯಿ ಘಟಕದ ಕೋಶಾಧಿಕಾರಿಯೂ ಆಗಿರುವ ದಿನೇಶ ಶೆಟ್ಟರು, ಅಕ್ಟೋಬರ್ 18, 2019 ರಂದು ದುಬಾಯಿಯ ಶೇಖ್ ರಶೀದ್ ಆಡಿಟೋರಿಯಂನಲ್ಲಿ ಪಟ್ಲ ಸಂಭ್ರಮ 2019 ಮತ್ತು ದುಬಾಯಿ ಯಕ್ಷಗಾನ ಅಭ್ಯಾಸ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ " ಮಹಿಷಮರ್ದಿನಿ ಜಗಜ್ಜನನಿ" ಯ ಹೊಣೆಹೊತ್ತು ನಿರ್ವಹಿಸಿ ಸಂಘಟನಾ ಚತುರಾನನರೆನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಮೇರು ನಟ ಪುನೀತ್ ರಾಜಕುಮಾರರ ಉಪಸ್ಥಿತಿ ಮತ್ತು ಹಾಸ್ಯವೈಭವವೇ ಮೊದಲಾದ ಹಲವು ಪ್ರಥಮಗಳ ಜೊತೆ ಕಾರ್ಯಕ್ರಮ ಸಂಘಟಿಸಿ ಯಶಸ್ಸು ಕಂಡಿದ್ದಾರೆ.
ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬನ ಕುಂಬಳೆ- ಕಣಿಪುರ ಸಂಜಾತೆ ಆರತಿ ಎಂಬ ಸದ್ಗೃಹಿಣಿಯ ಜೊತೆ ತನ್ನಿಬ್ಬರು ಮಕ್ಕಳು ಅದಿತಿ, ಆದಿತ್ಯರ ಜೊತೆ ಸಂತೃಪ್ತ ಜೀವನ ನಡೆಸುತ್ತಿರುವ ಶೆಟ್ಟರು ತನ್ನ ಹುಟ್ಟೂರಿನ ಶ್ರೀ ರಾಮ ಮಂದಿರದ ಪ್ರತಿಷ್ಠಾಪನಾ ದಿನಾಚರಣೆಯಂದು ಪ್ರತೀವರ್ಷ ವೈದ್ಯಕೀಯ ಶಿಬಿರ, ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಹಾಯಧನ ಮುಂತಾದ ಸಮಾಜಮುಖಿ ಕಾರ್ಯಗಳನ್ನೂ ನಡೆಸುತ್ತಿದ್ದಾರೆ.
🖋️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)
ಸಹಕಾರ : ಶೇಖರ್ ಶೆಟ್ಟಿಗಾರ್ ಕಿನ್ನಿಗೋಳಿ