
ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿದ ದರೋಡೆಕೊರರು; ಮಾಲೀಕನಿಗೆ ಗನ್ ತೋರಿಸಿ ಚಿನ್ನಾಭರಣ ದೋಚಿ ಪರಾರಿ
ಕಲಬುರಗಿ: ಕಲಬುರಗಿ ನಗರದ ಸರಾಫ್ ಬಜಾರ್‌ನಲ್ಲಿ ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿದ ದರೋಡೆಕೊರರು ಮಾಲೀಕನಿಗೆ ಗನ್ ತೋರಿಸಿ ಎರಡರಿಂದ ಮೂರು ಕೆಜಿ ಚಿನ್ನಾಭರಣ ದೋಚಿರುವ ಘಟನೆ ಶುಕ್ರವಾರ ನಡೆದಿದೆ.
ಇಂದು ಮಧ್ಯಾಹ್ನ 12:30ರ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಚಿನ್ನದ ಅಂಗಡಿಗೆ ನುಗ್ಗಿದ ನಾಲ್ವರು ದರೋಡೆಕೋರರು, ಅಂಗಡಿ ಮಾಲೀಕ ಸಬಕಾ ಮಾಲೀಕ್ ಅವರಿಗೆ ಗನ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ, ನಂತರ ಆತನ ಕೈ ಕಾಲು ಕಟ್ಟಿ ಬಾಯಿಗೆ ಸೆಲ್ಲೋ ಟೆಪ್ ಸುತ್ತಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ದರೋಡೆಕೋರರು ಚಿನ್ನದಂಗಡಿಗೆ ನುಗ್ಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಲಬುರಗಿ ನಗರದ ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾಲೀಕನಿಗೆ ಗನ್ ತೋರಿಸಿ ದರೋಡೆ ಮಾಡಿದ್ದಾರೆ. ದರೋಡೆ ಪ್ರಕರಣದ ತನಿಖೆಗೆ ಐದು ವಿಶೇಷ ತಂಡ ರಚನೆ ಮಾಡಿದ್ದೇವೆ. ಆದಷ್ಟು ಬೇಗ ದರೋಡೆಕೋರರ ಬಂಧನ ಮಾಡುತ್ತೇವೆ. ಅಂಗಡಿಯಲ್ಲಿದ್ದ 2-3 ಕೆಜಿ ಚಿನ್ನ ದರೋಡೆಯಾಗಿದೆ. ಈ ಅಂಗಡಿಯವರು ಪ್ರತಿನಿತ್ಯ 15-20 ಗ್ರಾಂ ಚಿನ್ನಾಭರಣ ಮಾರಟ ಮಾಡುತ್ತಿದ್ದರು ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಅವರು ತಿಳಿಸಿದ್ದಾರೆ.