
ಉಡುಪಿ ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ನಾಗರಪಂಚಮಿ ಆಚರಣೆ
Tuesday, July 29, 2025
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಇಂದು ನಾಗರಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.ತುಳುನಾಡಿನ ದ್ರಾವಿಡ ಜನಾಂಗದ ಬಹುತೇಕ ವರ್ಗಗಳು ಆರಾಧಿಸಿಕೊಂಡು ಬಂದಿರುವ ನಾಗರ ಪಂಚಮಿ ಶ್ರದ್ಧೆ , ಭಕ್ತಿಯಿಂದ ಸಂಪನ್ನಗೊಳ್ಳುತ್ತಿದೆ.
ಕರಾವಳಿಯ ನಾಗಸ್ಥಾನ, ಮೂಲನಾಗಸ್ಥಾನ, ದೇಗುಲಗಳಿಗೆ ತೆರಳಿದ ಭಕ್ತರು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರಿಗೆ ಹಿಂಗಾರ, ಅರಶಿನ, ಕೇದಗೆ, ಕೆಂದಾಳಿ ಸೀಯಾಳ ಅಭಿಷೇಕ ಅರ್ಪಿಸಿದರು. ಕೆಲವು ಕಡೆ ಮಳೆ ಇದ್ದರೂ ಭಕ್ತರು ಮಳೆಯಲ್ಲೇ ನಿಂತು ದೇವರಿಗೆ ಸೇವೆ ಸಲ್ಲಿಸಿದರು.
ಹೆಚ್ಚಿನ ಮೂಲನಾಗನ ಸನ್ನಿಧಿಯಲ್ಲಿ ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು, ನಾಗದೇವರಿಗೆ ಮೊರೆ ಹೋದರು. ಹಿರಿಯರು ಆರಾಧಿಸಿಕೊಂಡು ಬಂದಿರುವ ನಾಗ ಸನ್ನಿಧಿಗೆ ತನು-ತಂಬಿಲ ಎಳೆ ನೀರು, ಹಾಲು ಅಭಿಷೇಕ ಸೇವೆ ಕೊಟ್ಟರು.ಇನ್ನು ಉಡುಪಿ, ಕಾಪು ಕುಂದಾಪುರ ಸಹಿತ ಜಿಲ್ಲೆಯ ಸುಬ್ರಹ್ಮಣ್ಯ ದೇವಸ್ಥಾನಗಳು ಭಕ್ತರಿಂದ ತುಂಬಿದ್ದವು.