ಯೆಮನ್‌ ನಿಮಿಷಾ ಪ್ರಿಯಾ ಪ್ರಕರಣ; ಎ.ಪಿ.ಅಬೂಬಕರ್ ಮುಸ್ಲಿಯಾರ್ ಮಧ್ಯಸ್ಥಿಕೆ: ಗಲ್ಲು ಶಿಕ್ಷೆ ಮುಂದೂಡಿಕೆ

ಯೆಮನ್‌ ನಿಮಿಷಾ ಪ್ರಿಯಾ ಪ್ರಕರಣ; ಎ.ಪಿ.ಅಬೂಬಕರ್ ಮುಸ್ಲಿಯಾರ್ ಮಧ್ಯಸ್ಥಿಕೆ: ಗಲ್ಲು ಶಿಕ್ಷೆ ಮುಂದೂಡಿಕೆ

ನವದೆಹಲಿ: ಯೆಮೆನ್‌ನಲ್ಲಿ ಸ್ಥಳೀಯ ಪ್ರಜೆಯನ್ನು ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯೆಮನ್ ಆಡಳಿತವು ಬುಧವಾರ (ಜುಲೈ 16) ದಂದು ನಿಮಿಷ ಅವರಿಗೆ ಮರಣ ದಂಡನೆ ಜಾರಿಗೆ ಸಮಯ ನಿಗದಿಪಡಿಸಿತ್ತು.

ನಿಮಿಷ ಪ್ರಿಯಾ ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಕೇರಳದ ಪ್ರಭಾವಿ ಸುನ್ನಿ ಮುಸ್ಲಿಂ ಧಾರ್ಮಿಕ ಗುರು ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಮಧ್ಯಪ್ರವೇಶ ಸೇರಿದಂತೆ ವಿವಿಧ ಕಡೆಗಳಿಂದ ನಿರಂತರ ರಾಜತಾಂತ್ರಿಕ ಪ್ರಯತ್ನಗಳ ನಂತರ, ಯೆಮೆನ್ ಸ್ಥಳೀಯ ಅಧಿಕಾರಿಗಳು ಮರಣದಂಡನೆಯನ್ನು ವಿಳಂಬಗೊಳಿಸಲು ಒಪ್ಪಿಕೊಂಡಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿಗಳು ದೃಢಪಡಿಸಿದ್ದಾರೆ.

'ಈ ಪ್ರಕರಣದ ಆರಂಭದಿಂದಲೂ ಭಾರತ ಸರ್ಕಾರವು ಸಾಧ್ಯವಿರುವ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದು, ಇತ್ತೀಚೆಗೆ ನಿಮಿಷ ಪ್ರಿಯಾ ಅವರ ಕುಟುಂಬವು ಸಂತ್ರಸ್ತರ ಕುಟುಂಬದೊಂದಿಗೆ ಇತ್ಯರ್ಥ ಅಥವಾ ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ಮಾತುಕತೆ ನಡೆಸಲು ಹೆಚ್ಚಿನ ಸಮಯ ಕೋರಲು ಸಂಘಟಿತ ಪ್ರಯತ್ನಗಳನ್ನು ಮಾಡಿದೆ' ಎಂದು ಮೂಲವೊಂದು ತಿಳಿಸಿದೆ.

ರಾಜತಾಂತ್ರಿಕ ಸೂಕ್ಷ್ಮತೆಗಳು ಮತ್ತು ಸಂಕೀರ್ಣ ಕಾನೂನು ಹಿನ್ನೆಲೆಯ ಹೊರತಾಗಿಯೂ, ಭಾರತೀಯ ಅಧಿಕಾರಿಗಳು ಯೆಮೆನ್ ಜೈಲು ಅಧಿಕಾರಿಗಳು ಮತ್ತು ಪ್ರಾಸಿಕ್ಯೂಟರ್ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದರು.

ನಿಮಿಷ ಪ್ರಿಯಾ ಯೆಮೆನ್ ಪ್ರಜೆಯೊಬ್ಬರ ಸಾವಿಗೆ ಸಂಬಂಧಿಸಿದಂತೆ ಶಿಕ್ಷೆಗೊಳಗಾಗಿದ್ದು, ಗಲ್ಲುಶಿಕ್ಷೆಗೆ ಗುರಿಯಾಗಿದ್ದಾರೆ. ಈ ಪ್ರಕರಣವು ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಗಮನ ಸೆಳೆದಿದ್ದು, ವಿವಿಧ ಕಡೆಗಳಿಂದ ಕ್ಷಮಾದಾನ ಮತ್ತು ರಾಜತಾಂತ್ರಿಕ ಹಸ್ತಕ್ಷೇಪಕ್ಕಾಗಿ ಮನವಿಗಳು ಬಂದಿವೆ.

ನಿಮಿಷ ಅವರ ಕುಟುಂಬ ಮತ್ತು ಇತರ ಕಾನೂನು ಪ್ರತಿನಿಧಿಗಳು ಯೆಮೆನ್‌ನಲ್ಲಿ ಮಾತುಕತೆಗಳನ್ನು ಮುಂದುವರಿಸುತ್ತಿರುವುದರಿಂದ ಹೆಚ್ಚಿನ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ.

ಯೆಮೆನ್‌ನಲ್ಲಿ ಶರಿಯಾ ಕಾನೂನು ಜಾರಿಯಲ್ಲಿದೆ. ಆರೋಪಿಗಳು ಪರಿಹಾರದ ರೂಪದಲ್ಲಿ ನೀಡುವ ಮೊತ್ತವಾದ 'ಬ್ಲಡ್ ಮನಿ' ಕೊಟ್ಟು ಶಿಕ್ಷೆಯಿಂದ ಪಾರಾಗಲು ಅವಕಾಶವಿದೆ.


Ads on article

Advertise in articles 1

advertising articles 2

Advertise under the article