
ಯೆಮೆನ್‌ನಲ್ಲಿ ಕೇರಳದ ನರ್ಸ್‌ಗೆ ಜು.16ರಂದು ನೇಣು; ಮರಣದಂಡನೆ ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರಕಾರ
ನವದೆಹಲಿ: ಜು.16ರಂದು ಯೆಮೆನ್‌ನಲ್ಲಿ ಗಲ್ಲಿಗೇರಿಸಲು ನಿಗದಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಬಿಡುಗಡೆ ಮಾಡಿಸಲು ಅಥವಾ ಮರಣದಂಡನೆಯನ್ನು ತಡೆಯಲು ಹೆಚ್ಚಿನದ್ದನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸರ್ಕಾರದ ಹಸ್ತಕ್ಷೇಪಕ್ಕೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ನಾವು ಈಗಾಗಲೇ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದು ಯೆಮನ್ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಸರ್ಕಾರವು ಹೆಚ್ಚಿನದನ್ನು ಏನು ಮಾಡಲು ಸಾಧ್ಯವಿಲ್ಲ. ಯೆಮೆನ್‌ನ ಸೂಕ್ಷ್ಮತೆಯನ್ನು ನೋಡಿದರೆ, ಅದು ರಾಜತಾಂತ್ರಿಕವಾಗಿ ಗುರುತಿಸಲ್ಪಟ್ಟಿಲ್ಲ ರಾಷ್ಟ್ರ. ಶಿಕ್ಷೆ ಬದಲಿಗೆ ಪರಿಹಾರ ರೂಪದಲ್ಲಿ ಹಣ ನೀಡುವ ಬಗ್ಗೆ ಮಾತುಕತೆ ನಡೆದಿದೆ. ಅಲ್ಲಿಯ ಶೇಖ್ ಜೊತೆಗೆ ಮಾತುಕತೆಗೆ ಪ್ರಯತ್ನ ಪಟ್ಟಿದೆ. ಆದರೆ ಅಲ್ಲಿಂದ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಬಂದಿಲ್ಲ ಎಂದು ವಿವರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ, ಪ್ರಕರಣದ ವಿಚಾರಣೆಯನ್ನು ಶುಕ್ರವಾರ ನಡೆಸಲಾಗುವುದು. ಪ್ರತಿವಾದಿಗಳಿಗೆ ಸರ್ಕಾರದ ಪ್ರಯತ್ನಗಳ ಮಾಹಿತಿ ನೀಡಬೇಕು ಎಂದು ಸೂಚಿಸಿದೆ. ಇಂಟರ್‌ನ್ಯಾಷನಲ್ ಆಕ್ಷನ್ ಕೌನ್ಸಿಲ್ ಎಂಬ ಸಂಸ್ಥೆ ನಿಮಿಷ ಪ್ರಿಯಾ ಪರವಾಗಿ ಈ ಅರ್ಜಿಯನ್ನು ಸಲ್ಲಿಸಿದೆ.