
ಯೆಮನ್‌ನಲ್ಲಿ ರದ್ದುಗೊಂಡ ಕೇರಳ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ! ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದ್ದೇನು..?
ಸನಾ: ಯೆಮೆನ್‌ನಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಈ ಹಿಂದೆ ಅಮಾನತುಗೊಂಡಿದ್ದ ಮರಣದಂಡನೆ ಶಿಕ್ಷೆಯನ್ನ ಸಂಪೂರ್ಣವಾಗಿ ರದ್ದು ಮಾಡಲಾಗಿದೆ ಎಂದು ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರ ಕಚೇರಿ ಈ ಮಾಹಿತಿ ನೀಡಿದೆ.
ಗ್ರ್ಯಾಂಡ್ ಮುಫ್ತಿ ಕಚೇರಿ ಮಾಹಿತಿ ಪ್ರಕಾರ, ಯೆಮೆನ್ ರಾಜಧಾನಿ ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಶಿಕ್ಷೆ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಯೆಮನ್ ಸರ್ಕಾರದಿಂದ ಅಧಿಕೃತ ಲಿಖಿತ ಪ್ರಕಟಣೆ ಬಂದಿಲ್ಲ ಎಂದೂ ಸಹ ಸ್ಪಷ್ಟಪಡಿಸಲಾಗಿದೆ.
37 ವರ್ಷದ ನಿಮಿಷಾ ಪ್ರಿಯಾ ಮರಣದಂಡನೆ ಸಂಪೂರ್ಣ ರದ್ದಾದ ಬಗ್ಗೆ ಗ್ರ್ಯಾಂಡ್ ಮುಫ್ತಿ ಕಚೇರಿ ಹೇಳಿಕೆಯನ್ನ ಕೇಂದ್ರ ಸರ್ಕಾರ ನಿರಾಕರಿಸಿದೆ. ಶಿಕ್ಷೆ ಸಂಪೂರ್ಣ ರದ್ದಾಗಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯಾಗಲಿ, ಲಿಖಿತ ಆದೇಶವಾಗಲಿ ಬಂದಿಲ್ಲ. ನಿಮಿಷಾ ಪ್ರಕರಣದ ಕುರಿತು ಕೆಲ ವ್ಯಕ್ತಿಗಳು ಹಂಚಿಕೊಳ್ಳುತ್ತಿರುವ ಮಾಹಿತಿ ತಪ್ಪಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ (MEA) ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ನಿಮಿಷಾ ಪ್ರಿಯಾ ಯಾರು?
ನಿಮಿಷಾ ಪ್ರಿಯಾ ಯೆಮನ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನರ್ಸ್. ಯೆಮನ್ ನಾಗರಿಕ ತಲಾಲ್ ಅಬ್ದೋ ಮೆಹದಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾರೆ. ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ, 2017 ರಲ್ಲಿ ಕೊಲೆ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅದಕ್ಕೂ ಮುನ್ನ ಅವರು ಹಲವಾರು ವರ್ಷಗಳ ಕಾಲ ಆ ದೇಶದಲ್ಲಿ ನರ್ಸ್ ಆಗಿ ಕೆಲಸ ಮಾಡಿದ್ದರು.
ತಲಾಲ್ ಅವರ ಬೆಂಬಲದೊಂದಿಗೆ, ನಿಮಿಷಾ 2015ರ ಏಪ್ರಿಲ್‌ನಲ್ಲಿ ವಿದೇಶದಲ್ಲಿ ತನ್ನ ಕನಸಿನ ಚಿಕಿತ್ಸಾಲಯವನ್ನು ತೆರೆದರು. ಅಲ್ಲಿ ಅವರು ಮಾನಸಿಕ, ದೈಹಿಕ ಮತ್ತು ಆರ್ಥಿಕ ಕಿರುಕುಳವನ್ನು ಅನುಭವಿಸಿದ್ದಾರೆಂದು ಆರೋಪಿಸಲಾಗಿದೆ. ತಲಾಲ್ ಕ್ಲಿನಿಕ್‌ನಲ್ಲಿ ಶೇ.33 ರಷ್ಟು ಪಾಲನ್ನು ಪಡೆಯಲು ಸುಳ್ಳು ದಾಖಲೆ ಸೃಷ್ಟಿಸಿದ್ದ. ಆಕೆಯ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಂಡಿದ್ದ. ಕಾನೂನುಬದ್ಧವಾಗಿ ಮದುವೆಯಾಗಿದ್ದಾವೆಂದು ಸೂಚಿಸಲು ವಿವಾಹ ಪ್ರಮಾಣಪತ್ರವನ್ನು ಸಹ ನಕಲಿ ಮಾಡಿದ್ದ. ಮಹ್ದಿ ತನ್ನ ಮೇಲೆ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಿಮಿಷಾ ಆರೋಪಿಸಿದ್ದರು.
2017ರ ಜುಲೈನಲ್ಲಿ ನಿಮಿಷಾ ಜೈಲಿಗೆ ಭೇಟಿ ನೀಡಿದಾಗ, ತನ್ನ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯಲು ಮಹ್ದಿಗೆ ನಿದ್ರಾಜನಕ ಇನ್‌ಜೆಕ್ಷನ್ ಚುಚ್ಚಿದರು. ಪ್ರಮಾಣ ಅತಿಯಾದ್ದರಿಂದ ವ್ಯಕ್ತಿ ಮೃತಪಟ್ಟಿದ್ದ. ಮತ್ತೊಬ್ಬ ನರ್ಸ್ ಸಹಾಯ ಪಡೆದು ಮೃತದೇಹ ವಿಲೇವಾರಿಗೆ ಮುಂದಾಗಿದ್ದರು. ದೇಹವನ್ನು ಕತ್ತರಿಸಿ ನೀರಿನ ಟ್ಯಾಂಕ್‌ನಲ್ಲಿ ಭಾಗಗಳನ್ನು ವಿಲೇವಾರಿ ಮಾಡುವಂತೆ ಸೂಚಿಸಿದ್ದ. ಇಬ್ಬರೂ ತಲೆಮರೆಸಿಕೊಂಡಿದ್ದರು. ಕೊನೆಗೆ ಅವರನ್ನು ಪೊಲೀಸರು ಬಂಧಿಸಿದರು.
ಕೊಲೆ ಪ್ರಕರಣದಲ್ಲಿ ಪ್ರಿಯಾಳನ್ನು ಬಂಧಿಸಿ ಯೆಮನ್‌ನಲ್ಲಿ ವಿಚಾರಣೆ ನಡೆಸಲಾಯಿತು. 2020 ರಲ್ಲಿ, ಸ್ಥಳೀಯ ನ್ಯಾಯಾಲಯವು ಆಕೆಗೆ ಒಮ್ಮೆ ಅಲ್ಲ, ಮೂರು ಬಾರಿ ಮರಣದಂಡನೆ ವಿಧಿಸಿತು. ನಂತರ ಮೇಲ್ಮನವಿ ನ್ಯಾಯಾಲಯವು ಒಂದು ಶಿಕ್ಷೆಯನ್ನು ರದ್ದುಗೊಳಿಸಿತು. ಆದಾಗ್ಯೂ, ದೇಶದ ಸುಪ್ರೀಂ ಕೋರ್ಟ್ ಉಳಿದ ಎರಡು ಶಿಕ್ಷೆಯನ್ನು ಎತ್ತಿಹಿಡಿಯಿತು. ಯೆಮನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ, ಕಳೆದ ವರ್ಷ ಆಕೆಗೆ ಮರಣದಂಡನೆಯನ್ನು ಅನುಮೋದಿಸಿದರು. ಪ್ರಿಯಾ ಪ್ರಸ್ತುತ ಸನಾ ಕೇಂದ್ರ ಜೈಲಿನಲ್ಲಿದ್ದಾರೆ. ಈ ವರ್ಷದ ಜನವರಿಯಲ್ಲಿ, ಹೌತಿ ನಿಯಂತ್ರಿತ ಸುಪ್ರೀಂ ಪೊಲಿಟಿಕಲ್ ಕೌನ್ಸಿಲ್‌ನ ಅಧ್ಯಕ್ಷ ಮಹ್ದಿ ಅಲ್-ಮಶಾತ್ ಅವರು ಮರಣದಂಡನೆಯನ್ನು ಅನುಮೋದಿಸಿದರು.
ಬ್ಲಡ್ ಮನಿ ಅಂದ್ರೆ ಏನು?
ಪ್ರಿಯಾ ಅವರು ಯೆಮನ್‌ನಲ್ಲಿದ್ದು ಸಾಮಾಜಿಕ ಕಾರ್ಯಕರ್ತರೊಬ್ಬರೊಂದಿಗೆ ಕ್ಷಮಾ ಪರಿಹಾರ ಮೊತ್ತದ (ಬ್ಲಡ್ ಮನಿ) ವಿಚಾರವಾಗಿ ಮೃತಪಟ್ಟ ವ್ಯಕ್ತಿಯ ಕುಟುಂಬದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆತನ ಕುಟುಂಬವು ಕ್ಷಮಾ ಪರಿಹಾರ ಮೊತ್ತವನ್ನು ಸ್ವೀಕರಿಸಲು ಒಪ್ಪಿದರೆ ಮಾತ್ರ ಮರಣ ದಂಡನೆಯನ್ನು ತಪ್ಪಿಸಲು ಸಾಧ್ಯ ಎಂದು ಹೇಳಲಾಗಿತ್ತು.