
ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಹೋರಾಡಿದ್ದು ಸೇನೆ, ಕ್ರೆಡಿಟ್ ಬಯಸುತ್ತಿರೋದು ಮಾತ್ರ ಮೋದಿ: ಪ್ರಿಯಾಂಕಾ ಗಾಂಧಿ ಕಿಡಿ
ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸೇನೆಯು ದೇಶಕ್ಕಾಗಿ ಹೋರಾಡಿತು. ಆದ್ರೆ ಅದರ ಕ್ರೆಡಿಟ್ ಅನ್ನು ಪ್ರಧಾನಿ ಮೋದಿ ಬಯಸುತ್ತಿದ್ದಾರೆ. ನಿಮಗೆ ದೊಡ್ಡ ನಮಸ್ಕಾರ ಅಂತ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ತಿವಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀವು 11 ವರ್ಷದಿಂದ ಅಧಿಕಾರದಲ್ಲಿದ್ದೀರಿ. ನಿನ್ನೆ ಗೌರವ್ ಗೊಗೊಯ್ ಅವರು ಜವಾಬ್ದಾರಿ ಬಗ್ಗೆ ಮಾತನಾಡುತ್ತಿದ್ದಾಗ ರಾಜನಾಥ್ ಸಿಂಗ್ ತಲೆಯಾಡಿಸುತ್ತಿದ್ದರು, ಗೃಹ ಸಚಿವರು ನಗುತ್ತಿದ್ದರು. ಮುಂಬೈ ದಾಳಿ ನಡೆದಾಗ ಮನಮೋಹನ್ ಸಿಂಗ್ ಸರ್ಕಾರ ಏನೂ ಮಾಡಲಿಲ್ಲ ಅಂತ ಹೇಳಿದ್ರು. ಆದ್ರೆ ಅವರಿಗೆ ನೆನಪಿಲ್ಲ ಅನ್ನಿಸುತ್ತೆ, ದಾಳಿ ನಡೆಯುತ್ತಿದ್ದಾಗಲೇ ಮೂವರು ಉಗ್ರರು ಹತರಾದರು, ಬದುಕುಳಿದ ಒಬ್ಬನನ್ನು ಹಿಡಿದು ಗಲ್ಲಿಗೇರಿಸಲಾಯಿತು. ಆ ಸಂದರ್ಭದಲ್ಲಿ ಮಹಾರಾಷ್ಟ್ರದ ಸಿಎಂ, ದೇಶದ ಗೃಹ ಸಚಿವರಾಗಿದ್ದವರು ರಾಜೀನಾಮೆ ಕೊಟ್ಟರು. ಆದ್ರೆ ಉರಿ-ಪುಲ್ವಾಮಾ ದಾಳಿ ರಾಜನಾಥ್ ಸಿಂಗ್ ಗೃಹ ಸಚಿವರಾಗಿದ್ದರು, ಈಗ ರಕ್ಷಣಾ ಸಚಿವರಾಗಿದ್ದಾರೆ. ಅಮಿತ್ ಶಾ ಅವರ ಅಧಿಕಾರವಧಿಯಲ್ಲಿ ಮಣಿಪುರ ಹೊತ್ತಿ ಉರಿಯುತ್ತಿದೆ. ದೆಹಲಿಯಲ್ಲಿ ಗಲಭೆಗಳು ನಡೆಯುತ್ತಿವೆ. ಅದೇ ಹಾದಿಯಾಗಿ ಪಹಲ್ಗಾಮ್ ದಾಳಿಯೂ ನಡೆಯಿತು. ರಾಜೀನಾಮೆ ಕೊಡದೇ ಈಗಲೂ ಗೃಹಸಚಿವರಾಗಿಯೇ ಇದ್ದಾರೆ ಎಂದು ಕುಟುಕಿದರು.
ಪಹಲ್ಗಾಮ್ ದಾಳಿಯನ್ನ ಖಂಡಿಸಲು ಇಡೀ ದೇಶವೇ ಒಗ್ಗಟ್ಟಾಗಿ ನಿಂತಿತು. ದೇಶದ ಮೇಲೆ ದಾಳಿ ನಡೆದರೆ ನಾವೆಲ್ಲರೂ ಸರ್ಕಾರದ ಜೊತೆ ಒಟ್ಟಾಗಿ ನಿಲ್ಲುತ್ತೇವೆ ಅನ್ನೋದನ್ನ ತೋರಿಸಿಕೊಟ್ಟಿತು. ಅದರಂತೆ ಆಪರೇಷನ್ ಸಿಂಧೂರಲ್ಲಿ ಸೇನೆಯು ಧೈರ್ಯದಿಂದ ಹೋರಾಡಿತು. ಆದ್ರೆ ಅದರ ಕ್ರೆಡಿಟ್ ಮೋದಿ ಬಯಸುತ್ತಿದ್ದಾರೆ ಎಂದು ಅಮಾಧಾನ ಹೊರಹಾಕಿದರು.
ಸಚಿವರು ಎಲ್ಲಾ ಅಂಶಗಳನ್ನು ನೀಡಿದ್ರು, ಆದ್ರೆ ಪಹಲ್ಗಾಮ್ ದಾಳಿ ಹೇಗೆ ಮತ್ತು ಏಕೆ ಆಯಿತು? ಈ ಪ್ರಶ್ನೆ ನನ್ನನ್ನ ಇನ್ನೂ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜನ ಸರ್ಕಾರವನ್ನು ನಂಬಿ ಪಹಲ್ಗಾಮ್‌ಗೆ ಹೋಗಿದ್ದರು. ಆದ್ರೆ ಸರ್ಕಾರ ಏನು ಮಾಡಿತು? ದಾಳಿಗೆ ಯಾರು ಹೊಣೆ? ನಾಗರಿಕರ ಸುರಕ್ಷತೆ ರಕ್ಷಣಾ ಸಚಿವರ ಜವಾಬ್ದಾರಿಯಲ್ಲವೇ, ಗೃಹ ಸಚಿವರ ಜವಾಬ್ದಾರಿಯಲ್ಲವೇ? ಎಂದು ಪ್ರಶ್ನೆಗಳ ಮಳೆ ಸುರಿಸಿದರಲ್ಲೇ ಟಿಆರ್‌ಎಫ್ ಭಯಾನಕ ದಾಳಿಯನ್ನ ಹೇಗೆ ಯೋಜಿಸುತ್ತಿದೆ ಅನ್ನೋದರ ಪರಿಕಲ್ಪನೆ ಸರ್ಕಾರದ ಯಾವುದೇ ಸಂಸ್ಥೆಗೆ ಇಲ್ಲದಂತಾಗಿದೆ. ಇದು ಏಜೆನ್ಸಿಗಳ ವೈಫಲ್ಯ ಅಲ್ಲವೇ? ಖಂಡಿತಾ ಇದು ಭದ್ರತಾ ಸಂಸ್ಥೆಗಳ ಬಹುದೊಡ್ಡ ವೈಫಲ್ಯ ಎಂದು ಆಕ್ರೋಶ ಹೊರಹಾಕಿದರು.