
ಲೋಕಸಭೆ ಅಧಿವೇಶನದಲ್ಲಿ ನೆಹರು, ಕಾಂಗ್ರೆಸ್ ವಿರುದ್ಧ ಗುಡುಗಿದ ಅಮಿತ್ ಶಾ!
ನವದೆಹಲಿ: ಆಪರೇಷನ್ ಸಿಂಧೂರ್ ಬಗ್ಗೆ ಲೋಕಸಭೆ ಅಧಿವೇಶನದಲ್ಲಿ ನಿನ್ನೆಯಿಂದ (ಸೋಮವಾರ) ಚರ್ಚೆ ನಡೆಯುತ್ತಿದೆ. ನಿನ್ನೆ ಎನ್ಡಿಎ ಸರ್ಕಾರಕ್ಕೆ ಪ್ರಶ್ನೆಗಳ ಚಾಟಿ ಬೀಸಿದ್ದ ವಿಪಕ್ಷಗಳಿಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ತಿರುಗೇಟು ನೀಡಿದ್ದಾರೆ.
ಪಹಲ್ಗಾಮ್ ದಾಳಿಗೂ ಪಾಕಿಸ್ತಾನಕ್ಕೂ ಏನು ಸಂಬಂಧ? ಎಂದು ಕೇಳಿದ್ದ ಕಾಂಗ್ರೆಸ್ ಸಂಸದ ಪಿ. ಚಿದಂಬರಂ ವಿರುದ್ಧ ಅಮಿತ್ ಶಾ ಹರಿಹಾಯ್ದಿದ್ದಾರೆ. “ನಿನ್ನೆ ಕಾಂಗ್ರೆಸ್ ನಾಯಕರು ಭಯೋತ್ಪಾದಕರು ಎಲ್ಲಿಂದ ಬಂದರು ಮತ್ತು ಅದಕ್ಕೆ ಯಾರು ಹೊಣೆ ಎಂದು ನಮ್ಮನ್ನು ಕೇಳುತ್ತಿದ್ದರು. ಖಂಡಿತ, ನಾವು ಅಧಿಕಾರದಲ್ಲಿರುವುದರಿಂದ ಅದಕ್ಕೆ ಉತ್ತರ ನೀಡುರುವುದು ನಮ್ಮ ಜವಾಬ್ದಾರಿ. ನಿನ್ನೆ, ಮಾಜಿ ಗೃಹ ಸಚಿವ ಚಿದಂಬರಂ ಪ್ರಶ್ನೆಯನ್ನು ಎತ್ತಿದರು. ಭಯೋತ್ಪಾದಕರು ಪಾಕಿಸ್ತಾನದಿಂದ ಬಂದರು ಎಂಬುದಕ್ಕೆ ಪುರಾವೆ ಏನು? ಎಂದು ಪ್ರಶ್ನಿಸಿದ್ದರು. ಪಾಕಿಸ್ತಾನವನ್ನು ಉಳಿಸುವುದರಿಂದ ಅವರಿಗೆ ಏನು ಸಿಗುತ್ತದೆ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ. ನಾವು ಸಾಕ್ಷಿಗಳನ್ನು ಇಟ್ಟುಕೊಂಡೇ ಮಾತನಾಡುತ್ತಿದ್ದೇವೆ. ನಿನ್ನೆ ಎನ್ಕೌಂಟರ್ನಲ್ಲಿ ಮೃತರಾದ ಮೂವರು ಉಗ್ರರು ಪಾಕಿಸ್ತಾನದ ನಂಟು ಹೊಂದಿದವರು ಎಂಬುದಕ್ಕೆ ಅವರ ಬಳಿ ಸಿಕ್ಕ ಐಡಿಗಳೇ ಸಾಕ್ಷಿ” ಎಂದು ಅಮಿತ್ ಶಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಆಪರೇಷನ್ ಸಿಂಧೂರ್ ಪಾಕಿಸ್ತಾನದಲ್ಲಿ ನಡೆದ ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯನ್ನು ಬಯಲು ಮಾಡಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ನಮ್ಮ ಭದ್ರತಾ ಪಡೆಗಳು 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ತಟಸ್ಥಗೊಳಿಸಿವೆ. ಭಾರತದ ಸಶಸ್ತ್ರ ಪಡೆಗಳು ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಗಳನ್ನು ದುರ್ಬಲಗೊಳಿಸಿದವು; ದಾಳಿಗಳನ್ನು ನಿಲ್ಲಿಸುವಂತೆ ಭಾರತವನ್ನು ವಿನಂತಿಸುವುದನ್ನು ಬಿಟ್ಟು ಪಾಕಿಸ್ತಾನಕ್ಕೆ ಬೇರೆ ದಾರಿ ಇರಲಿಲ್ಲ” ಎಂದು ಹೇಳಿದ್ದಾರೆ.
ನೆಹರು ಬಗ್ಗೆ ಟೀಕೆ....
1948ರಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಿಒಕೆಯನ್ನು ವಾಪಾಸ್ ಪಡೆಯಲು ನಿರ್ಣಾಯಕ ಸ್ಥಾನದಲ್ಲಿದ್ದವು. ಆದರೆ ಆಗಿನ ಪ್ರಧಾನಿ ನೆಹರು ಏಕಪಕ್ಷೀಯ ಕದನ ವಿರಾಮವನ್ನು ಘೋಷಿಸಿದರು ಎಂದು ಅಮಿತ್ ಶಾ ಟೀಕಿಸಿದ್ದಾರೆ.
“ನಿನ್ನೆ, ಕಾಂಗ್ರೆಸ್ ನಾಯಕರು ನಮ್ಮ ಬಳಿ ಪಾಕಿಸ್ತಾನದ ಜೊತೆ ಯಾಕೆ ಯುದ್ಧ ಮಾಡಲಿಲ್ಲ? ಕದನವಿರಾಮ ಘೋಷಿಸಲು ಕಾರಣವೇನು? ಎಂಬ ಪ್ರಶ್ನೆ ಕೇಳಿದರು. ಇಡೀ ದೇಶಕ್ಕೆ ಗೊತ್ತಿರುವ ಸಂಗತಿಯೇನೆಂದರೆ ಇಂದು, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಅಸ್ತಿತ್ವದಲ್ಲಿರುವುದಕ್ಕೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರೇ ಕಾರಣ. 1960ರಲ್ಲಿ ಅವರು ಸಿಂಧೂ ನೀರಿನ 80% ಅನ್ನು ಪಾಕಿಸ್ತಾನಕ್ಕೆ ನೀಡಿದರು. 1971ರಲ್ಲಿ ಶಿಮ್ಲಾ ಒಪ್ಪಂದದ ಸಮಯದಲ್ಲಿ ಅವರು ಪಿಒಕೆಯನ್ನು ಮರೆತರು. ಆಗ ಅವರು ಪಿಒಕೆಯನ್ನು ವಶಪಡಿಸಿಕೊಂಡಿದ್ದರೆ ಈಗ ನಾವು ಅಲ್ಲಿನ ಶಿಬಿರಗಳ ಮೇಲೆ ದಾಳಿ ಮಾಡಬೇಕಾಗಿರಲಿಲ್ಲ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ನಾಯಕರ ಬೆವರಿಳಿಸಿದ್ದಾರೆ.
“ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಅಸ್ತಿತ್ವಕ್ಕೆ ಬರಲು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರೇ ನೇರ ಹೊಣೆಗಾರರು. ಇಂದು ಪಿಒಕೆ ಅಸ್ತಿತ್ವದಲ್ಲಿದ್ದರೆ, ಅದು ಜವಾಹರಲಾಲ್ ನೆಹರೂ ಅವರ ಕದನ ವಿರಾಮದಿಂದಾಗಿ. ಅದರ ಫಲವನ್ನು ನಾವು ಅನುಭವಿಸುತ್ತಿದ್ದೇವೆ” ಎಂದು ಅಮಿತ್ ಶಾ ಹೇಳಿದ್ದಾರೆ. 1949ರಲ್ಲಿ ಮೊದಲ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ನಿರ್ಧಾರವನ್ನು ಉಲ್ಲೇಖಿಸಿದ ಅಮಿತ್ ಶಾ, “ಇದು ಪಾಕಿಸ್ತಾನಕ್ಕೆ ಕಾಶ್ಮೀರದ ಒಂದು ಭಾಗದ ಮೇಲೆ ನಿಯಂತ್ರಣವನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು ಎಂದಿದ್ದಾರೆ. 1960ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಈ ಕ್ರಮವನ್ನು ವಿರೋಧಿಸಿದ್ದರು. ಆದರೆ, ನೆಹರು ತೆಗೆದುಕೊಂಡ ತಪ್ಪು ನಿರ್ಧಾರದಿಂದ ಈಗಲೂ ಪಿಒಕೆ ಅಸ್ತಿತ್ವದಲ್ಲಿದೆ” ಎಂದು ಅಮಿತ್ ಶಾ ಕಿಡಿ ಕಾರಿದ್ದಾರೆ.
“ಅಷ್ಟೇ ಅಲ್ಲ, ನಾವು ಸಿಂಧೂ ನೀರಿನ ಮೇಲೆ ಹೆಚ್ಚು ಪ್ರಾಬಲ್ಯ ಹೊಂದಿದ್ದೆವು. ಆದರೆ ಸಿಂಧೂ ನೀರಿನ ಒಪ್ಪಂದದ ನಂತರ ನಾವು 80% ನೀರನ್ನು ಪಾಕಿಸ್ತಾನಕ್ಕೆ ನೀಡಿದ್ದೇವೆ.ಆ ನಿರ್ಧಾರವೂ ನಿಮ್ಮ ನೆಹರು ಅವರದ್ದೇ. 1971ರಲ್ಲಿ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾರತದ ವಿಜಯದ ನಂತರ ಕಾಂಗ್ರೆಸ್ ಮತ್ತೊಂದು ನಿರ್ಣಾಯಕ ಅವಕಾಶವನ್ನು ಕಳೆದುಕೊಂಡಿತು. 1971ರ ಗೆಲುವಿನ ಬಗ್ಗೆ ನಮಗೆ ಹೆಮ್ಮೆ ಇದೆ. ನಮ್ಮಲ್ಲಿ 93,000 ಪಾಕಿಸ್ತಾನಿ ಯುದ್ಧ ಕೈದಿಗಳಿದ್ದರು, ಅವರ ಸೈನ್ಯದ ಸುಮಾರು 42%ರಷ್ಟು ಕೈದಿಗಳು ನಮ್ಮ ಬಳಿ ಇದ್ದರು. ಆದರೂ, ನಾವು ಆಗ ಪಿಒಕೆ ನಮಗೆ ಬೇಕೆಂದು ಕೇಳಲಿಲ್ಲ” ಎಂದು ಅವರು ಇತಿಹಾಸವನ್ನು ಕೆದಕುವ ಮೂಲಕ ಕಾಂಗ್ರೆಸ್ ನಾಯಕರು ಮಾಡಿದ ತಪ್ಪನ್ನು ಮತ್ತೆ ನೆನಪಿಸಿದ್ದಾರೆ.
ಪಹಲ್ಗಾಮ್ ದಾಳಿಯ ಉಗ್ರರ ಹತ್ಯೆ....
ಆಪರೇಷನ್ ಸಿಂಧೂರ್ ಕುರಿತು ಲೋಕಸಭೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ, “ಪಹಲ್ಗಾಮ್ನಲ್ಲಿ ಅವರ ಕುಟುಂಬಗಳ ಮುಂದೆಯೇ ಅವರ ಧರ್ಮವನ್ನು ಕೇಳುವ ಮೂಲಕ ಅಮಾಯಕ ನಾಗರಿಕರನ್ನು ಕೊಲ್ಲಲಾಯಿತು. ಈ ಅನಾಗರಿಕ ಕೃತ್ಯವನ್ನು ನಾನು ಖಂಡಿಸುತ್ತೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಹಾನುಭೂತಿ ವ್ಯಕ್ತಪಡಿಸುತ್ತೇನೆ. ಆಪರೇಷನ್ ಮಹಾದೇವ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರದ ಪೊಲೀಸರು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಭಯೋತ್ಪಾದಕರಾದ ಸುಲೇಮಾನ್, ಅಫ್ಘಾನ್, ಜಿಬ್ರಾನ್ನನ್ನು ತಟಸ್ಥಗೊಳಿಸಿದ್ದಾರೆ. ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಆದರೆ, ಪಹಲ್ಗಾಮ್ ದಾಳಿಯ ಉಗ್ರರ ಹತ್ಯೆಯ ವಿಷಯ ಕೇಳಿ ವಿರೋಧಪಕ್ಷದವರು ಸಂತೋಷಪಡಬಹುದು ಎಂದುಕೊಂಡಿದ್ದೆ. ಆದರೆ, ಅವರಿಗೆ ಯಾಕೋ ಖುಷಿ ಆದಂತಿಲ್ಲ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಆಪರೇಷನ್ ಮಹಾದೇವ್...
ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ದಿನವೇ ಅಂದರೆ ಮೇ 22ರಂದು ಆಪರೇಷನ್ ಮಹಾದೇವ್ ಅನ್ನು ಪ್ರಾರಂಭಿಸಲಾಯಿತು ಎಂದು ಅಮಿತ್ ಶಾ ಲೋಕಸಭೆಯಲ್ಲಿ ಹೇಳಿದ್ದಾರೆ. ಅದೇ ದಿನ ಸಂಜೆ ನಾನು ಶ್ರೀನಗರ ತಲುಪಿದೆ. ಆ ಸಂಜೆ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಲಾಯಿತು. ಅಲ್ಲಿ ಭಯೋತ್ಪಾದಕರು ದೇಶ ಬಿಟ್ಟು ಪಲಾಯನ ಮಾಡಲು ಬಿಡಬಾರದು ಎಂದು ನಿರ್ಧರಿಸಲಾಯಿತು. ಅದರಿಂದ ಆರಂಭವಾಗಿದ್ದೇ ಆಪರೇಷನ್ ಮಹಾದೇವ್ ಕಾರ್ಯಾಚರಣೆ ಎಂದು ಅಮಿತ್ ಶಾ ಮಾಹಿತಿ ನೀಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಕುರಿತು ಸಂಸತ್ತು ಸೋಮವಾರದಿಂದ ಮೂರು ದಿನಗಳ ಚರ್ಚೆಯನ್ನು ಪ್ರಾರಂಭಿಸಿತು. ಪಾಕಿಸ್ತಾನದ ಭಯೋತ್ಪಾದನಾ ಪ್ರಾಯೋಜಕ ಪಡೆಗಳಿಗೆ ನೀಡಿದ ನಿರ್ಣಾಯಕ ಕ್ರಮ ಮತ್ತು ಸೂಕ್ತ ಉತ್ತರಕ್ಕಾಗಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮೋದಿ ಸರ್ಕಾರವನ್ನು ಶ್ಲಾಘಿಸಿದವು. ಭಾರತೀಯ ಸಶಸ್ತ್ರ ಪಡೆಗಳ ಸಾಮರ್ಥ್ಯದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ವಿರೋಧ ಪಕ್ಷಗಳನ್ನು ಟೀಕಿಸಿದವು. ಮತ್ತೊಂದೆಡೆ, ಭದ್ರತಾ ಲೋಪಗಳ ಆರೋಪ ಮತ್ತು ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದವು. ಪಹಲ್ಗಾಮ್ ದಾಳಿಯ ಹಿಂದಿನ ಭಯೋತ್ಪಾದಕರನ್ನು ಬಂಧಿಸಲು ಭದ್ರತಾ ಸಂಸ್ಥೆಗಳು ಏಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.