
ದಕ್ಷಿಣ ಭಾರತೀಯರು ನಡೆಸುವ ಡ್ಯಾನ್ಸ್ ಬಾರ್-ಲೇಡೀಸ್ ಬಾರ್‌ಗಳಿಗೆ ಆಹಾರ ಪೂರೈಕೆ ಗುತ್ತಿದೆ ನೀಡಬಾರದು: ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಬುಲ್ದಾನಾ ವಿಧಾನಸಭಾ ಕ್ಷೇತ್ರದ ಶಿವಸೇನಾ ಶಾಸಕ
ಮುಂಬೈ: ಹಳಸಿದ ಆಹಾರ ನೀಡಿದ್ದಾರೆ ಎಂದು ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಬುಲ್ದಾನಾ ವಿಧಾನಸಭಾ ಕ್ಷೇತ್ರದ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಅವರು ಈಗ ದಕ್ಷಿಣ ಭಾರತೀಯರನ್ನು ಗುರಿಯಾಗಿಸಿಕೊಂಡು ಹೊಸ ವಿವಾದ ಹುಟ್ಟುಹಾಕಿದ್ದಾರೆ.
ದಕ್ಷಿಣ ಭಾರತೀಯರು "ಡ್ಯಾನ್ಸ್ ಬಾರ್ ಮತ್ತು ಲೇಡೀಸ್ ಬಾರ್‌ಗಳನ್ನು ನಡೆಸುತ್ತಾರೆ". ಆದ್ದರಿಂದ ಅವರಿಗೆ ಮಹಾರಾಷ್ಟ್ರದಲ್ಲಿ ಆಹಾರ ಪೂರೈಕೆ ಗುತ್ತಿದೆ ನೀಡಬಾರದು ಎಂದು ಸಂಜಯ್ ಗಾಯಕ್ವಾಡ್ ಅವರು ಗುರುವಾರ ಹೇಳಿದ್ದಾರೆ.
"ಶೆಟ್ಟಿ ಎಂಬ ಗುತ್ತಿಗೆದಾರರಿಗೆ ಏಕೆ ಕಾಂಟ್ರ್ಯಾಕ್ಟ್ ನೀಡಲಾಯಿತು? ಅದನ್ನು ಮರಾಠಿ ವ್ಯಕ್ತಿಗೆ ನೀಡಿ. ನಾವು ಏನು ತಿನ್ನುತ್ತೇವೆ ಎಂದು ಅವರಿಗೆ ಗೊತ್ತಿದೆ ಮತ್ತು ನಮಗೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡುತ್ತಾರೆ. ದಕ್ಷಿಣ ಭಾರತೀಯರು ಡ್ಯಾನ್ಸ್ ಬಾರ್ ಮತ್ತು ಲೇಡೀಸ್ ಬಾರ್‌ಗಳನ್ನು ನಡೆಸುತ್ತಾರೆ ಮತ್ತು ಮಹಾರಾಷ್ಟ್ರದ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಅವರು ನಮ್ಮ ಮಕ್ಕಳನ್ನು ಭ್ರಷ್ಟಗೊಳಿಸಿದ್ದಾರೆ. ಇಂತಹವರು ಉತ್ತಮ ಆಹಾರ ಹೇಗೆ ನೀಡುತ್ತಾರೆ?" ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಶಾಸಕ ಪ್ರಶ್ನಿಸಿದ್ದಾರೆ.
ಮಂಗಳವಾರ ಸಂಜೆ, "ಹಳಸಿದ" ದಾಲ್ ಮತ್ತು ಅನ್ನವನ್ನು ನೀಡಿದ್ದರಿಂದ ಕೋಪಗೊಂಡ ಸಂಜಯ್ ಗಾಯಕ್ವಾಡ್, ಕೊಲಾಬಾದ ಶಾಸಕರ ಹಾಸ್ಟೆಲ್‌ನ ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು.
ಗಾಯಕ್ವಾಡ್ ಕ್ಯಾಂಟೀನ್ ಸಿಬ್ಬಂದಿಗೆ ಹೊಡೆಯುತ್ತಿರುವ ವಿಡಿಯೋ ಬುಧವಾರ ವೈರಲ್ ಆಗಿದ್ದು, ವಿರೋಧ ಪಕ್ಷಗಳಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.