
ಉಡುಪಿ: ಕುಡಿಯುವ ನೀರು ಸರಬರಾಜಿಗೆ ಅಡಚಣೆ ಆಗದಂತೆ ಹೆದ್ದಾರಿ ಕಾಮಗಾರಿ ನಡೆಸಿ: ಶಾಸಕ ಯಶ್ ಪಾಲ್ ಸುವರ್ಣ
ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ, ನೀರು ಸರಬರಾಜು ಪೈಪ್ ಲೈನ್ ಸ್ಥಳಾಂತರ ಬಗ್ಗೆ ಸಭೆ
ಉಡುಪಿ: ಉಡುಪಿ ನಗರದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆ ಹಾಗೂ ರಾಷ್ಟೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆ ರಸ್ತೆ ಬದಿ ಹಾದು ಹೋಗುವ ಉಡುಪಿ ನಗರಸಭೆಯ ಕುಡಿಯವ ನೀರು ಪೈಪ್ ಲೈನ್ ಸ್ಥಳಾಂತರ ಪ್ರಕ್ರಿಯೆ ಬಗ್ಗೆ ಅಧಿಕಾರಿಗಳ ಜೊತೆ ಶಾಸಕ ಯಶ್ ಪಾಲ್ ಸುವರ್ಣ ಸಭೆ ನಡೆಸಿದರು.
ನಗರದ ಪಾರ್ಕಿಂಗ್ ಹಾಗೂ ಟ್ರಾಫಿಕ್ ನಿರ್ವಹಣೆಯ ಬಗ್ಗೆ ಪೊಲೀಸ್ ಉಪ ಅಧೀಕ್ಷಕರಾದ ಶ್ರೀ ಡಿ. ಟಿ. ಪ್ರಭು ಅವರ ಜೊತೆ ಸಮಾಲೋಚನೆ ನಡೆಸಿದ ಶಾಸಕರು ನಗರದಲ್ಲಿ ವಾಹನಗಳನ್ನು ರಸ್ತೆಯ ಬದಿಯಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವ ಮೂಲಕ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಸಿಟಿ ಬಸ್ ನಿಲ್ದಾಣ, ಕರಾವಳಿ ಜಂಕ್ಷನ್, ತೆಂಕಪೇಟೆ, ಅಜ್ಜರಕಾಡು ಟ್ರೈನಿಂಗ್ ಶಾಲೆ ರಸ್ತೆ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕೆಳ ಪರ್ಕಳ ಭಾಗದಲ್ಲಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಹಾಗೂ ಆ ಭಾಗದಲ್ಲಿ ಸುಗಮ ಸಂಚಾರಕ್ಕೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಹೇಳಿದರು.
ರಾಷ್ಟೀಯ ಹೆದ್ದಾರಿ 169 ಎ ರಸ್ತೆ ಬದಿಯಲ್ಲಿ ಉಡುಪಿ ನಗರಸಭೆ ಕುಡಿಯುವ ನೀರು ಸರಬರಾಜು ಪೈಪ್ ಲೈನ್ ಗಳನ್ನು ಸ್ಥಳಾಂತರಿಸುವ ಬಗ್ಗೆ ವಾರಾಹಿ ಯೋಜನೆಯ ಅಧಿಕಾರಿಗಳೊಡನೆ ಮಾಹಿತಿ ಪಡೆದು, ಕುಡಿಯುವ ನೀರು ಸರಬರಾಜಿಗೆ ಅಡಚಣೆಯಾಗದಂತೆ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಮನ್ವಯತೆಯೊಂದಿಗೆ ಕಾಮಗಾರಿ ನಡೆಸುವಂತೆ ಹೇಳಿದರು.
ಸಭೆಯಲ್ಲಿ ಉಡುಪಿ ನಗರಸಭೆ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಸುಂದರ ಕಲ್ಮಾಡಿ, ಪೌರಾಯುಕ್ತರಾದ ಶ್ರೀ ಮಹಾಂತೇಶ್ ಹಂಗರಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಶ್ರೀ ಮಂಜುನಾಥ ನಾಯಕ್, ನವೀನ್, ವಾರಾಹಿ ಯೋಜನೆಯ ಶ್ರೀ ಅರ್ಕೇಶ್ ಗೌಡ, ನಗರ ಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀ ದುರ್ಗಾ ಪ್ರಸಾದ್, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.