
ತುಳುನಾಡಿನ ಮಹಿಳೆಯರಿಗಾಗಿ "ಮಿಸ್ ಆ್ಯಂಡ್ ಮಿಸಸ್ ಮಂಗಳೂರು ದಿವಾ ಮಿಡಲ್ ಈಸ್ಟ್- 2025" ಅಂತಾರಾಷ್ಟ್ರೀಯ ಸೌಂದರ್ಯ ಪ್ರದರ್ಶನ ಸ್ಪರ್ಧೆ; ಮಂಗಳೂರಿನಲ್ಲಿ ಅಡಿಷನ್, ದುಬೈನಲ್ಲಿ ಫೈನಲ್ ಸ್ಪರ್ಧೆ
ಘೋಷನ್ ಇವೆಂಟ್ಸ್ ಮೀಡಿಯಾ, ಪ್ರಿಯಾ ಫ್ಯಾಶನ್ ದುಬೈ, ತುಂಬೆ ಮೆಡಿ ಸಿಟಿ ಅಜ್ಮನ್ ಆಯೋಜನೆ
ಉಡುಪಿ: ಘೋಷನ್ ಇವೆಂಟ್ಸ್ ಮೀಡಿಯಾ ಮತ್ತು ಪ್ರಿಯಾ ಫ್ಯಾಶನ್ ದುಬೈ ಇದರ ಆಶ್ರಯದಲ್ಲಿ ತುಂಬೆ ಮೆಡಿ ಸಿಟಿ ಅಜ್ಮನ್ ಇದರ ಸಹಯೋಗದಲ್ಲಿ "ಮಿಸ್ ಆ್ಯಂಡ್ ಮಿಸಸ್ ಮಂಗಳೂರು ದಿವಾ ಮಿಡಲ್ ಈಸ್ಟ್- 2025" ಅಂತರಾಷ್ಟ್ರೀಯ ಸೌಂದರ್ಯ ಪ್ರದರ್ಶನ ಸ್ಪರ್ಧೆಯನ್ನು ನವೆಂಬರ್ ತಿಂಗಳಲ್ಲಿ ದುಬೈನಲ್ಲಿ ಆಯೋಜಿಸಲಾಗಿದೆ. ಈ ಸ್ಪರ್ಧೆಯ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಘೋಷನ್ ಇವೆಂಟ್ಸ್ ಮೀಡಿಯಾದ ದೆಚಮ್ಮ ಅವರು, ತುಳುನಾಡಿನ ಮಹಿಳೆಯರಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಈ ಸೌಂದರ್ಯ ಪ್ರದರ್ಶನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆ ಎರಡು ವಿಭಾಗಗಳಲ್ಲಿ ನಡೆಯಲಿದೆ. "ಮಿಸ್ ಮಂಗಳೂರು ದಿವಾ" ಸ್ಪರ್ಧೆಯಲ್ಲಿ 18ರಿಂದ 35ವರ್ಷದೊಳಗಿನ ಅವಿವಾಹಿತ ಮಹಿಳೆಯರು ಭಾಗವಹಿಸಬಹುದು. ಮಿಸಸ್ ಮಂಗಳೂರು ದಿವಾ ಸ್ಪರ್ಧೆಯಲ್ಲಿ ಎಲ್ಲ ವಯೋಮಿತಿಯ ವಿವಾಹಿತ ಮಹಿಳೆಯರು ಭಾಗವಹಿಸಬಹುದು ಎಂದರು.
ಆಗಸ್ಟ್ ಅಂತ್ಯಕ್ಕೆ ನೋಂದಣಿ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ಆ ಬಳಿಕ ಮಂಗಳೂರಿನಲ್ಲಿ ಅಡಿಷನ್ ನಡೆಯಲಿದ್ದು, ಅಲ್ಲಿ ಆಯ್ಕೆಯಾಗುವ ಸ್ಪರ್ಧಿಗಳು ನವೆಂಬರ್ ನಲ್ಲಿ ದುಬೈನಲ್ಲಿ ನಡೆಯಲಿರುವ ಫೈನಲ್ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಲಿದ್ದಾರೆ. ಫೈನಲ್ ಗೆ ಆಯ್ಕೆಯಾಗುವ ಸ್ಪರ್ಧಿಗಳಿಗೆ ವಿಸಾ, ವಿಮಾನ ಟಿಕೆಟ್, ಮೂರು ದಿನದ ವಾಸ್ತವ್ಯವನ್ನು ಒದಗಿಸಲಾಗುವುದು. ಅಲ್ಲದೆ, ಊಟ, ಪ್ರಯಾಣ, ಫೋಟೋ ಶೂಟ್, ರ‌್ಯಾಂಪ್ ವಾಕ್ ತರಬೇತಿ, ಮೇಕಪ್ ಹಾಗೂ ಕಾಸ್ಟ್ಯೂಮ್ ಅನ್ನು ಉಚಿತವಾಗಿ ಆಯೋಜಕರು ಒದಗಿಸಲಿದ್ದಾರೆ ಎಂದು ತಿಳಿಸಿದರು.
ಘೋಷನ್ ಇವೆಂಟ್ಸ್ ಮೀಡಿಯಾದ ಸಬಿತಾ ಕರ್ಲೋ ಮಾತನಾಡಿ, ಫೈನಲ್ ನಲ್ಲಿ ಮೂರು ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿದೆ. ಮೊದಲ ಸುತ್ತಿನಲ್ಲಿ ಸಾಂಪ್ರದಾಯಿಕ ವಸ್ತ್ರ ಧರಿಸಿ ಪ್ರದರ್ಶನ ನೀಡಬೇಕು. ಎರಡನೇ ಸುತ್ತಿನಲ್ಲಿ ಫಿಜನ್ ಹಾಗೂ ಮೂರನೇ ಸುತ್ತಿನಲ್ಲಿ ಗೌನ್ ಧರಿಸಿ ವಾಕ್ ಮಾಡಬೇಕು. ಮೂರನೇ ಸುತ್ತಿನ ಬಳಿಕ ಪ್ರಶ್ನಾವಳಿ ಸುತ್ತು ನಡೆಯಲಿದೆ. ಟಾಪ್ ಮೂವರು ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಿಯಾ ಫ್ಯಾಶನ್ ಮಾಲಕಿ ಪ್ರಿಯಾ ಫೆರ್ನಾಂಡಿಸ್, ಮಿಸ್ಟರ್ ಯುಎಇ ವಿನ್ನರ್ ಗೌತಮ್ ಬಂಗೇರ, ವಿಷ್ಣುವರ್ಧನ್ ಭಟ್ ಇದ್ದರು.