
BJP-JDS ಪಾಲಾದ ಕೋಲಾರದ ವೇಮಗಲ್-ಕುರುಗಲ್ ಪಟ್ಟಣ ಪಂಚಾಯತ್; ಕಾಂಗ್ರೆಸ್‌ಗೆ ಮುಖಭಂಗ
ಕೋಲಾರ: ಕೋಲಾರ ಜಿಲ್ಲೆಯ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ.
ಒಟ್ಟು ಹದಿನೇಳು ವಾರ್ಡ್‌ಗಳಲ್ಲಿ ಆರು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಗೆದ್ದರೆ, ಜೆಡಿಎಸ್-ಬಿಜೆಪಿ ಮೈತ್ರಿಕೂಟ ಹತ್ತು ವಾರ್ಡ್‌ಗಳನ್ನು ಗೆದ್ದಿದೆ. ಒಂದು ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ. ಇದರೊಂದಿಗೆ ವೇಮಗಲ್ ಕುರುಗಲ್ ಪಟ್ಟಡ ಪಂಚಾಯ್ತಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿದಿದೆ.
2019 ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರ ವೇಮಗಲ್ ಗ್ರಾಮ ಪಂಚಾಯಿತಿ ಮತ್ತು ಕುರುಗಲ್ ಪಂಚಾಯತ್ ಅನ್ನು ವಿಲೀನಗೊಳಿಸಿ 17 ವಾರ್ಡ್‌ಗಳನ್ನು ಒಳಗೊಂಡ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಿತ್ತು.
ಮೊದಲ ಬಾರಿಗೆ ನಡೆದ ವೇಮಗಲ್ - ಕುರುಗಲ್ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಕಾಂಗ್ರೆಸ್, ಜೆಡಿಎಸ್ - ಬಿಜೆಪಿ ಮೈತ್ರಿಕೂಟವು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದವು ಮತ್ತು ಎರಡೂ ಪಕ್ಷಗಳು ಬಹಳ ಎಚ್ಚರಿಕೆಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಣಕ್ಕಿಳಿಸಿದ್ದವು.
ಕುತೂಹಲಕಾರಿಯಾಗಿ, ಕಾಂಗ್ರೆಸ್ ಸರ್ಕಾರದ ಕಂದಾಯ ಸಚಿವ ಕೃಷ್ಣೇ ಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ ಕುಮಾರ್ ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುವಂತೆ ನಾಯಕರಿಗೆ ಸೂಚಿಸಲಾಗಿತ್ತು.
ಮತ್ತೊಂದೆಡೆ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಸಂಸದ ಮುನಿಸ್ವಾಮಿ, ಜೆಡಿಎಸ್ ಹಿರಿಯ ನಾಯಕ ಸಿಎಂಆರ್ ಶ್ರೀನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ಅವರು ಮೈತ್ರಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದರು.