ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಮುಖ್ಯಮಂತ್ರಿ ದಿಢೀರ್ ಭೇಟಿ; ಸ್ವತಃ ರೋಗಿಗಳಿಂದಲೇ ಮಾಹಿತಿ ಪಡೆದ ಸಿದ್ದರಾಮಯ್ಯ
ಬೆಂಗಳೂರು: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕುತ್ತಿದೆಯೇ? ಚಿಕಿತ್ಸೆ ಪಡೆಯುವಲ್ಲಿ ಏನಾದರೂ ಅಡೆತಡೆಗಳಿವೆಯೇ? ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ಸ್ಪಂದನೆ ಹೇಗಿದೆ? ಎಂಬುದನ್ನು ಸ್ವತಃ ರೋಗಿಗಳಿಂದಲೇ ಮಾಹಿತಿ ಪಡೆದರು.
ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಬಹುತೇಕರು ಬಡವರು, ಖಾಸಗಿ ಆಸ್ಪತ್ರೆಯ ವೆಚ್ಚ ಭರಿಸಲಾಗದ ಕಾರಣಕ್ಕಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ಯಾವೊಬ್ಬ ರೋಗಿಯು ಗುಣಮಟ್ಟದ ಚಿಕಿತ್ಸೆಯಿಂದ ವಂಚಿತನಾಗಬಾರದೆಂದು ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಸಿಬ್ಬಂದಿ ಹಾಗೂ ಸಲಕರಣೆಗಳನ್ನು ಒದಗಿಸಲಾಗಿದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳು ಕೂಡ ಖಾಸಗಿ ಆಸ್ಪತ್ರೆಗಳಂತೆ ಉತ್ತಮ ಸೇವೆ, ಉತ್ಕೃಷ್ಟ ಸೌಲಭ್ಯ ಒದಗಿಸಲೇಬೇಕು. ಈ ವಿಷಯದಲ್ಲಿ ಯಾವ ರಾಜಿಯೂ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.




