
ಎಡಗೈ ಸಮುದಾಯಕ್ಕೆ ಶೇ 7% ರಷ್ಟು ಮೀಸಲಾತಿ ನೀಡಲು ಮಲ್ಲು ಹಲಗಿ ಮನವಿ
ಎಡಗೈ (ಮಾದಿಗ) ಸಮುದಾಯಗಳಿಗೆ ಶೇ 7% ರಷ್ಟು ಮೀಸಲಾತಿ ನೀಡುವಂತೆ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂ. ಆರ್.ಎಚ್. ಎಸ್.) ಜಿಲ್ಲಾ ಕಾರ್ಯದರ್ಶಿ ಕುರಕುಂದ ಮಲ್ಲು ಹಲಗಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದಾರೆ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮಾದಿಗರು ಅತಿ ಹೆಚ್ಚು ಜನಸಂಖ್ಯಾ ಹೊಂದಿದ್ದು, ಒಳ ಮೀಸಲಾತಿ ಜಾರಿ ಮಾಡುವ ಸಂಬಂಧ ನ್ಯಾ.ನಾಗಮೋಹನ್‌ದಾಸ್ ಆಯೋಗವು ರಚಿಸಿದ 1700 ಪುಟಗಳ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ಶೇ.7ರಷ್ಟು ಮೀಸಲಾತಿ ಎಡಗೈ (ಮಾದಿಗ) ಸಮುದಾಯಗಳಿಗೆ ದೊರತರೆ ಸ್ವಲ್ಪ ಉಸಿರಾಡಲು ಅವಕಾಶ ಆಗಲಿದೆ ಎಂದು ಮನವಿ ಮಾಡಿದ್ದಾರೆ.
ಕಳೆದ ಮೂರ್ನಾಲ್ಕು ದಶಕಗಳಿಂದ ಮಾದಿಗ ಸಮುದಾಯಕ್ಕೆ ನ್ಯಾಯ ಬದ್ಧವಾಗಿ ಸಿಗಬೇಕಿರುವ ಮೀಸಲಾತಿ ಸೌಲಭ್ಯಗಳು ಸಿಗುತ್ತಿಲ್ಲ ಈ ಸಂಬಂಧ ಒಳ ಮೀಸಲಾತಿ ಜಾರಿಯಾಗಲು ಮೂರ್ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ ಆ.1 ರಂದು ಸುಪ್ರೀಂ ಕೋರ್ಟ್ ಇದಕ್ಕೆ ಪೂರಕ ಆದೇಶ ಹೊರಡಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಗಮೋಹನ್‌ದಾಸ್ ಆಯೋಗ ರಚಿಸಿದರು. ಇದೀಗ ವರದಿ ಸಲ್ಲಿಕೆಯಾಗಿದ್ದು ಕುತೂಹಲ, ಆತಂಕ ಕಾಡುತ್ತಿದೆ ಎಂದು ಹೇಳಿದರು. ನ್ಯಾ.ಎ.ಜೆ. ಸದಾಶಿವ ಅವರು ಎಡಗೈ ಸಮುದಾಯಗಳಿಗೆ ಶೇ.6 ರಷ್ಟು ಮೀಸಲಾತಿ ಶಿಫಾರಸು ಮಾಡಿದ್ದರು. ಆಗ ಪರಿಶಿಷ್ಟ ಜಾತಿ ಮೀಸಲಾತಿ ಶೇ.15 ರಷ್ಟು ಇತ್ತು. ಈಗ ಮೀಸಲಾತಿ ಪ್ರಮಾಣ ಶೇ.17ಕ್ಕೆ ಹೆಚ್ಚಳ ಆಗಿದೆ. ಹೀಗಾಗಿ ಶೇ.7 ರಷ್ಟು ಆದರೂ ನೀಡಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂ.ಆರ್.ಎಚ್.ಎಸ್) ವಡಗೇರಾ ತಾಲೂಕು ಅಧ್ಯಕ್ಷ ಹಣಮಂತ ಮಾಲಹಳ್ಳಿ, ಮರಿಲಿಂಗ ವರಟೂರ್, ಸುರೇಶ್ ಹಾಲಗೇರಾ, ಹಣಮಂತ ಓಡಕರ್, ಬೆಂಜ್ ಮೇನ್ ಶಿವನೂರ್, ಕುಮಾರ್ ತುಮಕೂರ್, ಜೀವಲಪ್ಪ ಬೆಂಡೆಬೆಂಬಳಿ, ಸಿದ್ದು ಕಂದಹಳ್ಳಿ, ದೇವು ಕುರಿಹಾಳ ಅವರು ಮನವಿ ಮಾಡಿದ್ದಾರೆ.