
ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳ ಜಾಮೀನು ರದ್ದು: ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು...?
ಹೊಸದಿಲ್ಲಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸಿನಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ 7 ಮಂದಿ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದಾಗಿದೆ. ಕಳೆದ ವರ್ಷ ದೀಪಾವಳಿ ಸಮಯದಲ್ಲಿ ಹೈಕೋರ್ಟ್ ದರ್ಶನ್, ಪವಿತ್ರಾ ಗೌಡ ಸೇರಿ ಹಲವು ಮಂದಿಗೆ ಜಾಮೀನು ನೀಡಿತ್ತು.
ಸುಪ್ರೀಂಕೋರ್ಟ್ನ ನ್ಯಾ.ಜೆ.ಬಿ.ಪರ್ದಿವಾಲಾ, ನ್ಯಾ.ಆರ್.ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠದಿಂದ ಈ ಆದೇಶ ಬಂದಿದೆ. ಇದರಿಂದ ದರ್ಶನ್ ಜೈಲು ಸೇರಬೇಕಾದ ಪರಿಸ್ಥಿತಿ ಬಂದಿದೆ. ದರ್ಶನ್ ವೃತ್ತಿ ಜೀವನದ ಮೇಲೆ ಈ ತೀರ್ಪು ತುಂಬಾನೇ ಪ್ರಭಾವ ಬೀರಲಿದೆ.
ಹೈಕೋರ್ಟ್ ಆದೇಶದ ಲೋಪವನ್ನು ಎತ್ತಿ ತೋರಿಸಿದ ಸುಪ್ರೀಂ ಕೋರ್ಟ್, ಸಾಕ್ಷ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಆದೇಶಿಸಿ 7 ಮಂದಿಗೆ ಇಂದು ಬಿಗ್ ಶಾಕ್ ನೀಡಿದೆ.
‘ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಿದ್ದಾರೆ’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ‘ಆರೋಪಿ ಎಷ್ಟೇ ದೊಡ್ಡವರಿದ್ದರೂ ಅವರು ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಆಡಳಿತ ಎತ್ತಿ ಹಿಡಿಯಲಾಗಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿಗಳಿಗೆ 5 ಸ್ಟಾರ್ ಟ್ರೀಟ್ ಮೆಂಟ್ ನೀಡಲಾಗಿದೆ. ಜೈಲು ಸೂಪರಿಂಟೆಂಡ್ನನ್ನು ಸಸ್ಪೆಂಡ್ ಮಾಡಬೇಕಿತ್ತು’ ಎಂದು ಕೊರ್ಟ್ ಅಭಿಪ್ರಾಯಪಟ್ಟಿದೆ. ಈ ತೀರ್ಪು ಲ್ಯಾಂಡ್ ಮಾರ್ಕ್ ತೀರ್ಪೆಂದು ಸುಪ್ರೀಂಕೋರ್ಟ್ ಹೇಳಿದೆ.
2024ರ ಜೂನ್ 8ರಂದು ಚಿತ್ರದುರ್ಗದ ರೇಣುಕಾಸ್ವಾಮಿಯವರನ್ನು ಅಪಹರಿಸಿ ಕೊಲೆ ಮಾಡಿದ ಆರೋಪದಡಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು.
ದರ್ಶನ್, ಪವಿತ್ರಾ ಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್ ಹಾಗೂ ಜಗದೀಶ್ ಅವರಿಗೆ ಹೈಕೋರ್ಟ್ ನಿಯಮಿತ ಜಾಮೀನು ಮಂಜೂರು ಮಾಡಿತ್ತು. ಉಳಿದ ಹತ್ತು ಮಂದಿ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.