
ಕೆಆರ್‌ಎಸ್ ಡ್ಯಾಂಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಸಚಿವ ಹೆಚ್.ಸಿ.ಮಹದೇವಪ್ಪ
ಮಂಡ್ಯ: ಕೆಆರ್‌ಎಸ್ ಡ್ಯಾಂಗೆ (KRS Dam) ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿಕೆ ನೀಡಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಮಹದೇವಪ್ಪ, ಕೆಆರ್‌ಎಸ್ ಅಣೆಕಟ್ಟಿಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದರು. ಆದರೆ, ಈಗ ಇದನ್ನು ಹೇಳಲು ಯಾರಿಗೂ ಧೈರ್ಯ ಇಲ್ಲ. ಕೆಆರ್‌ಎಸ್ ಗೇಟ್ನ ಹೆಬ್ಬಾಗಿಲಿನಲ್ಲಿ ಈಗಲೂ ಅಡಿಗಲ್ಲು ಕಾಣಬಹುದು ಎಂದು ಹೇಳಿದರು.
ಟಿಪ್ಪು ದೇವದಾಸಿ ಪದ್ಧತಿ ರದ್ದು ಮಾಡಿದರು
ಚರಿತ್ರೆ ಗೊತ್ತಿಲ್ಲದವರು ಚರಿತ್ರೆ ನಿರ್ಮಾಣ ಮಾಡಲು ಸಾದ್ಯವಿಲ್ಲ ಎಂದು ಡಾ. ಬಿಆರ್ ಅಂಬೇಡ್ಕರ್ ಹೇಳಿದ್ದಾರೆ. ಟಿಪ್ಪು ಸುಲ್ತಾನ ಮಸೀದಿ ಪಕ್ಕದಲ್ಲಿ ಶ್ರೀರಂಗಪಟ್ಟಣದ ದೇವಸ್ಥಾನ ಇದೆ. ಈಕಡೆ ಅಲ್ಲವೋ ಅಕ್ಬರ್ ಅಂತಾರೆ, ಆಕಡೆ ಗಂಟೆ ಟನ್, ಟನ್ ಎನ್ನುತ್ತದೆ. ಟಿಪ್ಪು ಸುಲ್ತಾನ್ ಎರಡೂ ಕೇಳಿಕೊಂಡು ಇದ್ದರು. ಟಿಪ್ಪು ಸುಲ್ತಾನ್ ಸಮಚಿತ್ತರಾಗಿದ್ದವರು ಎಂದರು.
ಟಿಪ್ಪು ಸುಲ್ತಾನ್ ದೇವದಾಸಿ ಪದ್ಧತಿ ರದ್ದು ಮಾಡಿದರು. ಟಿಪ್ಪು ಸುಲ್ತಾನ್ ಅವರ ಕಾಲದಲ್ಲಿ ಒಂದೇ ಒಂದು ಇಂಚು ಭೂಮಿಯನ್ನು ಉಳ್ಳವರಿಗೆ ಕೊಟ್ಟಿರಲಿಲ್ಲ. ಟಿಪ್ಪು ಸುಲ್ತಾನ್ ಭಾರತ ದೇಶಕ್ಕೆ ರೇಷ್ಮೆ ಕೃಷಿ ತಂದರು. ಮೈಸೂರಿನ ಅರಮನೆ ಇದ್ದಿದ್ದು ಶ್ರೀರಂಗಪಟ್ಟಣದಲ್ಲಿ. ಟಿಪ್ಪು ಸುಲ್ತಾನ್ ರಣರಂಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದೊಡ್ಡ ಸ್ವತಂತ್ರ ಸೇನಾನಿ ಎಂದು ಹಾಡಿ ಹೊಗಳಿದರು.
ಕೆಆರ್‌ಎಸ್ ಅಣೆಕಟ್ಟೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿದೆ. ಕೆಆರ್‌ಎಸ್ ಅಣೆಕಟ್ಟು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಒಂದು ಪ್ರಮುಖ ಡ್ಯಾಂ ಆಗಿದೆ. ಇದು ಮೈಸೂರು ಜಿಲ್ಲೆಯ ಕೃಷ್ಣರಾಜಸಾಗರ ಪ್ರದೇಶದಲ್ಲಿದೆ. ಕೆಆರ್‌ಎಸ್ ಅಣೆಕಟ್ಟನ್ನು 1932 ರಲ್ಲಿ ಪೂರ್ಣಗೊಳಿಸಲಾಯಿತು ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಲಾಗಿದೆ. ಈ ಅಣೆಕಟ್ಟು ಮೈಸೂರು, ಮಂಡ್ಯ ಮತ್ತು ಬೆಂಗಳೂರು ನಗರಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಣೆಕಟ್ಟಿನ ಜೊತೆಗೆ ನಿರ್ಮಿಸಲಾದ ಬೃಂದಾವನ ಉದ್ಯಾನ ಉತ್ತಮವಾದ ಪ್ರವಾಸಿ ಆಕರ್ಷಣೆ ತಾಣವಾಗಿದೆ.