ಮಣಿಪಾಲದಲ್ಲಿ ವಿದ್ಯಾರ್ಥಿ, ಖಾಸಗೀ ಕೈಗಾರಿಕೆಯ ಕಾರ್ಮಿಕರನ್ನು ಗುರಿಯಾಗಿಸಿ ಡ್ರಗ್ಸ್‌ ಮಾರಾಟ; ಆರೋಪಿಗಳ ಬಂಧನ

ಮಣಿಪಾಲದಲ್ಲಿ ವಿದ್ಯಾರ್ಥಿ, ಖಾಸಗೀ ಕೈಗಾರಿಕೆಯ ಕಾರ್ಮಿಕರನ್ನು ಗುರಿಯಾಗಿಸಿ ಡ್ರಗ್ಸ್‌ ಮಾರಾಟ; ಆರೋಪಿಗಳ ಬಂಧನ

 

ಮಣಿಪಾಲ: ಇಲ್ಲಿನ ವಿದ್ಯಾರ್ಥಿಗಳನ್ನು ಮತ್ತು ಕೈಗಾರಿಕೆಗಳು, ಖಾಸಗಿ ಇಂಡಸ್ಟ್ರೀಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಗುರಿ ಮಾಡಿಕೊಂಡು ಗಾಂಜಾ ಮಾದಕ ವಸ್ತು ಮತ್ತು LSD ಡ್ರಗ್ಸ್ ಮಾರಾಟ ಮಾಡುತ್ತಿದ್ದ ಒಬ್ಬ ಸ್ಥಳೀಯ ಮತ್ತು ಇಬ್ಬರು ಕೇರಳ ಮೂಲದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳದ ಕಾರ್ಮಿಕರಾದ ಆಜೀಶ, ವಿಪಿನ್‌, ಬಿಪಿನ್‌ ಮತ್ತು ಆಕಿಲ್‌ ಹಾಗೂ ಇತರ ಇಬ್ಬರನ್ನು ಗಾಂಜಾ ಸೇವನೆಯ ಬಗ್ಗೆ ದೃಢಪಡಿಸಿಕೊಂಡು, ಅವರುಗಳ ಪರೀಕ್ಷೆ ಬಗ್ಗೆ ಸ್ಯಾಂಪಲ್‌ ಸ್ವೀಕರಿಸಿ ಪ್ರಯೋಗಾಲಯಕ್ಕೆ ನೀಡಲಾಗಿದ್ದು, ಅದರಲ್ಲಿ ನಾಲ್ಕು ಜನರು ಗಾಂಜಾ ಸೇವಿಸಿದ್ದು ದೃಢಪಟ್ಡಿದ್ದು. ಇವರುಗಳಿಗೆ ಗಾಂಜಾ ಪೂರೈಸಿದ ಬಗ್ಗೆ ಮಾಹಿತಿ ಕಲೆಹಾಕಿದ್ದು ಇವರುಗಳಿಗೆ ಆರೋಪಿ ಮಿಥುನ ಎನ್ನುವವನು ಗಾಂಜಾ ಮಾರಾಟ ಮಾಡಿದ ಬಗ್ಗೆ ತಿಳಿದುಬಂದಿದ್ದು, ವಿಚಾರಿಸಲಾಗಿ, ಬೆಂಗಳೂರಿನಿಂದ ಗಾಂಜಾ ಮತ್ತು LSD ಡ್ರಗ್ಸ್ ತರಿಸಿ ಮಣಿಪಾಲದಲ್ಲಿ ಮಾರಾಟ ಮಾಡುತ್ತಿರುವರ ಬಗ್ಗೆ ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡ ಕಳೆದ ಶನಿವಾರದಂದು ರಾತ್ರಿ ಮಣಿಪಾಲ ಠಾಣಾ ಸರಹದ್ದಿನ ಹೆರ್ಗ ಗ್ರಾಮದ ಈಶ್ವರನಗರ ನರಸಿಂಗೆ ದೇವಸ್ಥಾನ ರಸ್ತೆಯ ಬಳಿ ಇರುವ ಮಣಿಪಾಲ ಆಟೋ ಬಾರ್ ಎಂಬ ಕಟ್ಟಡದ ಮೊದಲನೇ ಮಹಡಿಯ ರೂಮ್ ನಂಬರ್ 03 ಕ್ಕೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ, ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳದ ತಿರುವಂತಪುರಂ ನಿವಾಸಿ ಅಫ್ಝಿನ್‌ ಉಡುಪಿಯ ಶಿವಳ್ಳಿ ಗ್ರಾಮದ ಶಿವನಿಧಿ ಆಚಾರ್ಯ ಇವರುಗಳನ್ನು ದಸ್ತಗಿರಿ ಮಾಡಿ ಆರೋಪಿತರುಗಳಿಂದ 1 kg 237 ಗ್ರಾಂ ಗಾಂಜಾ, 0.038 ಗ್ರಾಂ LSD ಸ್ಟ್ರಿಪ್ ಮಾದಕ ವಸ್ತು, ಪ್ಲಾಸ್ಟಿಕ್ ಕವರ್ ಗಳು, ಡಿಜಿಟಲ್ ಸ್ಕೇಲ್-1 ನಗದು 2000 ಹಾಗೂ 2 ಮೊಬೈಲ್ ಗಳನ್ನು ವಶಪಡಿಸಿಕೊಂಡು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಮನೀಶ್ ಮಾರಾಟ ಮಾಡಿದ ಆರು ಜನರ ಮಾದರಿ ಪರೀಕ್ಷೆಯಲ್ಲಿ 1) ಅಜೀಸ್‌(28), ಮುನ್ನೀರಿಟಿಕಾಡು, ಗ್ರಾಮ, ಪಾಲಾಕ್ಕಾಡ್‌ ಜಿಲ್ಲೆ, ಕೇರಳ, 2) ವಿಪಿನ್‌(32), ಮಾತುರ್‌ ಕೋಲಮನ್ನು ಪಂಚಾಯತ್‌, ಕೇರಳ, 3) ಬಿಪಿನ್‌(24), ಚುಂಗಮನ್‌ ಹೌಸ್‌, ತ್ರೀಶೂರ್‌ ಜಿಲ್ಲೆ, ಕೇರಳ ಮತ್ತು 4) ಆಖಿಲ್‌(26), ತುಟಿಕಾಡು ಪೋಸ್ಟ್‌, ಮಲ್ಲಪಳ್ಳಿ, ಕೇರಳ ಇವರಿಗೆ ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಿರುತ್ತದೆ. ಈ ನಾಲ್ಕು ಜನರಿಗೆ ಗಾಂಜಾ ಸೇವನೆ ಮಾಡಿದ ಬಗ್ಗೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ತನಿಖೆ ಮುಂದುವರೆಸಿದ ಮಣಿಪಾಲ್ ಪಿಎಸ್ಐ ಅಕ್ಷಯ ಕುಮಾರಿಯವರು ನಿನ್ನೆ ದಿನ ಪ್ರಕರಣದಲ್ಲಿ ಇನ್ನೊರ್ವ ಆರೋಪಿ ಕೇರಳದ ಕಾಸರಗೋಡು ನಿವಾಸಿ ಮನೀಷ್ ಈತನು ವಾಸಮಾಡಿಕೊಂಡಿರುವ ಮಣಿಪಾಲ ವಿದ್ಯಾರತ್ನ ನಗರದ ಮಾಂಡವಿ ಸಫಯಾರ್ ಅಪಾರ್ಟಮೆಂಟ್ ನ ಫ್ಲಾಟ್ ಸಂಖ್ಯೆ 004 ನೇದಕ್ಕೆ ದಾಳಿ ಮಾಡಿ ಆರೋಪಿಯ ಮನೆಯಲ್ಲಿ ಇದ್ದ 653 ಗ್ರಾಂ ಗಾಂಜಾ, 2 ಡಿಜಿಟಲ್ ಸ್ಕೇಲ್, 1 ಗಾಂಜಾ ಕ್ರಷರ್, ನಗದು 3000 ಹಾಗೂ 1 ಮೊಬೈಲ್ ಪೋನನ್ನು ಸ್ವಾಧೀನಪಡಿಸಿಕೊಂಡು 3 ಜನ ಆರೋಪಿತರುಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯ ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿತರ ಪೈಕಿ ಅಫ್ಶಿನ್ ವಿರುದ್ಧ 2023ರಲ್ಲಿ ಮಣಿಪಾಲದಲ್ಲಿ MDMA ಮಾರಾಟ ಪ್ರಕರಣ ದಾಖಲಾಗಿದ್ದು, ಮನೀಶ್ ವಿರುದ್ಧ ಕೇರಳದ ಬೇಕಲದಲ್ಲಿ ಗಾಂಜಾ ಸೇವನೆ ಪ್ರಕರಣ ದಾಖಲಾಗಿತ್ತು. ಆರೋಪಿತರ ಪೈಕಿ ಅಫ್ಶಿನ್ ಎಂಬಾತನು ಖಾಸಗಿ ಆಯುರ್ವೇದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಮತ್ತು ಕಾರ್ಮಿಕರನ್ನು ಗುರಿಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದನು. ಶಿವನಿಧಿಯು ಮಂಗಳೂರಿನಲ್ಲಿ ಎಂಜಿನಿಯಾರಿಂಗ್ ವಿದ್ಯಾರ್ಥಿ ಯಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದನು. ಮನೀಶ್ ಎಂಬಾತನು ವೆಲ್ಡಿಂಗ್ ಕೆಲಸ ಮಾಡುವ ವೃತ್ತಿ ಮಾಡಿಕೊಂಡು ಕೇರಳ ಹಾಗೂ ಹೊರರಾಜ್ಯಗಳಿಂದ ಬರುವ ಮಣಿಪಾಲದ ಸುತ್ತ ಮುತ್ತ ಇರುವ ಕಾರ್ಮಿಕರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದನು.

ಉಡುಪಿ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್ ಶಂಕರ್ ಐಪಿಎಸ್ ಇವರ ಸೂಚನೆ ಮೇರೆಗೆ ಮಣಿಪಾಲ ಪೊಲೀಸರು ಇತ್ತೀಚಿಗೆ ಹೊರ ರಾಜ್ಯಗಳ ವಿದ್ಯಾರ್ಥಿಗಳು ಮತ್ತು ಮಣಿಪಾಲದ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಡ್ರಗ್ಸ್ ಪರೀಕ್ಷೆ ನಡೆಸಿದಾಗ ಡ್ರಗ್ಸ್ ಸೇವನೆಯ ಪ್ರಕರಣಗಳು ಪತ್ತೆ ಆಗಿದ್ದು, ಡ್ರಗ್ಸ್ ಮೂಲವನ್ನು ಬೆನ್ನು ಬಿದ್ದಾಗ ಕೇರಳ ವ್ಯಕ್ತಿಗಳು ಡ್ರಗ್ಸ್ ಮಾರಾಟ ಮಾಡುತ್ತಿರುವ ಪ್ರಕರಣ ಪತ್ತೆಯಾಗಿದೆ ಎಂದು ಉಡುಪಿ ಜಿಲ್ಲಾ ಪೋಲೀಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article