
ಸ್ವಾತಂತ್ರ ದಿನದಂದು 'ಮಾಂಸ ಮಾರಾಟ ನಿಷೇಧ'; ಏನನ್ನು ತಿನ್ನಬೇಕು ಎಂಬುದು ನಮ್ಮ ಸ್ವತಂತ್ರ: ಹಲವು ನಾಯಕರಿಂದ ಭುಗಿಲೆದ್ದ ಆಕ್ರೋಶ
ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನದಂದು ಮಾಂಸದ ಅಂಗಡಿಗಳು ಮತ್ತು ಕಸಾಯಿಖಾನೆಗಳನ್ನು ಬಂದ್ ಮಾಡಬೇಕು ಎಂದು ದೇಶದ ಹಲವಾರು ಸ್ಥಳೀಯ ಸಂಸ್ಥೆಗಳು ಆದೇಶಿಸಿದ ಬೆನ್ನಲ್ಲೆ ದೊಡ್ಡ ರಾಜಕೀಯ ವಿವಾದ ಭುಗಿಲೆದ್ದಿದೆ. ಪಕ್ಷ ಬೇಧ ಮೀರಿ ಹಲವು ರಾಜಕಾರಣಿಗಳು ನಿಷೇಧವನ್ನು ಜನರ ಆಹಾರ ಪದ್ಧತಿಯ ಮೇಲಿನ ದಬ್ಬಾಳಿಕೆ ಎಂದು ಬಣ್ಣಿಸಿದ್ದಾರೆ ಮತ್ತು ದೇಶವು ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ ಸ್ವಾತಂತ್ರ್ಯವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ 16 ರಂದು ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಆದೇಶವನ್ನು ಹೈದರಾಬಾದ್ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ.
ದೇಶಾದ್ಯಂತ ಅನೇಕ ಮುನಿಸಿಪಲ್ ಕಾರ್ಪೊರೇಷನ್‌ಗಳು ಆಗಸ್ಟ್ 15 ರಂದು ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚಬೇಕೆಂದು ಆದೇಶಿಸಿದಂತಿದೆ. ದುರದೃಷ್ಟವಶಾತ್, @GHMCOnline ಕೂಡ ಇದೇ ರೀತಿಯ ಆದೇಶವನ್ನು ಮಾಡಿದೆ. ಇದು ಅಸಾಂವಿಧಾನಿಕ ಮತ್ತು ಅಸಾಂವಿಧಾನಿಕವಾಗಿದೆ. ಮಾಂಸಾಹಾರ ಸೇವನೆಗೂ ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದಕ್ಕೂ ಏನು ಸಂಬಂಧ? ತೆಲಂಗಾಣದ ಶೇ.99 ರಷ್ಟು ಜನರು ಮಾಂಸ ತಿನ್ನುತ್ತಾರೆ. ಈ ಮಾಂಸ ನಿಷೇಧವು ಜನರ ಸ್ವಾತಂತ್ರ್ಯ, ಗೌಪ್ಯತೆ, ಜೀವನೋಪಾಯ, ಸಂಸ್ಕೃತಿ, ಪೋಷಣೆ ಮತ್ತು ಧರ್ಮದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಓವೈಸಿ ಕಿಡಿಕಾರಿದ್ದಾರೆ.
ಮಹಾರಾಷ್ಟ್ರದ ಛತ್ರಪತಿ ಸಾಂಬಾಜಿನಗರದಲ್ಲಿ ಹೊರಡಿಸಿರುವ ಇದೇ ರೀತಿಯ ಆದೇಶವನ್ನು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಪ್ರಶ್ನಿಸಿದ್ದಾರೆ. ಇಂತಹ ನಿಷೇಧವನ್ನು ಹೇರುವುದು ತಪ್ಪು. ದೊಡ್ಡ ನಗರಗಳಲ್ಲಿ ವಿವಿಧ ಜಾತಿ, ಧರ್ಮದ ಜನರು ನೆಲೆಸಿರುತ್ತಾರೆ. ಇದೊಂದು ಭಾವನಾತ್ಮಕ ವಿಷಯವಾದರೆ ಅದನ್ನು ದಿನದ ಮಟ್ಟಿಗೆ ಜನರು ಸ್ವೀಕರಿಸುತ್ತಾರೆ. ಆದರೆ, ಮಹಾರಾಷ್ಟ್ರ ದಿನಾಚರಣೆ, ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ ದಿನದಿಂದು ಇಂತಹ ನಿಷೇಧ ಹೇರಿದರೆ, ಅದನ್ನು ಕಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಥಾಣೆ ಬಳಿಯ ಕಲ್ಯಾಣ್ ದಾಂಬಿವಾಲಿ ಮುನ್ಸಿಪಾಲ್ ಕಾರ್ಪೋರೇಷನ್ ಕೂಡಾ ಇದೇ ರೀತಿಯ ಆದೇಶ ಹೊರಡಿಸಿದ್ದು, ಕೂಡಲೇ ಇದನ್ನು ಹಿಂಪಡೆಯಬೇಕು ಎಂದು ಶಿವಸೇನಾ ನಾಯಕ ಅದಿತ್ಯ ಠಾಕ್ರೆ ಒತ್ತಾಯಿಸಿದ್ದಾರೆ. ಯಾರು ಏನನ್ನು ತಿನ್ನಬೇಕು ಎಂಬುದನ್ನು ನಿರ್ಧರಿಸಿವುದು ಅದಕ್ಕೆ ಕೆಲಸವಲ್ಲ ಎಂದಿದ್ದಾರೆ.
ಬಿಜೆಪಿ-ಶಿವಸೇನಾ- ಎನ್ ಸಿಪಿ ಸರ್ಕಾರ ಮಹಾರಾಷ್ಟ್ರದಲ್ಲಿ ಮಾಂಸ ನಿಷೇಧಕ್ಕೆ ಅನುಮೋದನೆ ನೀಡಿಲ್ಲ ಎಂದು ಏಕನಾಥ್ ಶಿಂಧೆ-ಶಿವಸೇನಾ ವಕ್ತಾರ ಅರುಣ್ ಸಾಂವಂತ್ ಹೇಳಿದ್ದಾರೆ. ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಅಪ ಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.