
ಧರ್ಮಸ್ಥಳ ವಿಚಾರ; ಜನಾರ್ದನ ರೆಡ್ಡಿಗೆ ಸಸಿಕಾಂತ್ ಸೆಂಥಿಲ್ ಕೊಟ್ಟ ತಿರುಗೇಟು ನೋಡಿ...
ಬೆಂಗಳೂರು: ಧರ್ಮಸ್ಥಳ ವಿಚಾರದಲ್ಲಿ ಶಾಸಕ ಜನಾರ್ದನ ರೆಡ್ಡಿ ಆರೋಪಗಳಿಗೆ ತಮಿಳುನಾಡಿನ ಕಾಂಗ್ರೆಸ್ ಸಂಸದ ಹಾಗೂ ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಬುಧವಾರ ಪ್ರತಿಕ್ರಿಯಿಸಿದ್ದಾರೆ. ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟಿದ್ದೇ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದರು.
ಈ ಕುರಿತು ಇಂದು ಪ್ರತಿಕ್ರಿಯಿಸಿರುವ ಸಸಿಕಾಂತ್ ಸೆಂಥಿಲ್, ಶಾಸಕ ಜನಾರ್ದನ ರೆಡ್ಡಿ ಆರೋಪ ಕೇವಲ ಉಹಾಪೋಹ. ಅವರು ಕಟ್ಟು ಕತೆಗಳನ್ನು ಹೇಳುತ್ತಿದ್ದಾರೆ. ರೆಡ್ಡಿ ಆರೋಪ ಕೇಳಿ ನಗು ಬರುತ್ತಿದೆ. ನನಗೆ ಇದರ ಹಿಂದೆ ಏನಿದೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.
ನಾನು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ 6 ವರ್ಷ ಆಗಿದೆ. ಈಗ ನಾನು ಬೇರೆ ಪಕ್ಷದಲ್ಲಿ ಇದ್ದೇನೆ. ನಾನು ಬಳ್ಳಾರಿಯಲ್ಲಿ ಕರ್ತವ್ಯದಲ್ಲಿ ಇದ್ದಾಗ ಜನಾರ್ಧನ ರೆಡ್ಡಿ ಅವರ ಬಂಧನ ಆಗಿತ್ತು. ನಾನು ಅವಾಗ ಮಾತ್ರ ರೆಡ್ಡಿಯವರನ್ನು ನೋಡಿದ್ದು ಎಂದು ಸೆಂಥಿಲ್ ಹೇಳಿದ್ದಾರೆ.
ಜನಾರ್ದನ ರೆಡ್ಡಿ ಹೇಳಿಕೆಗಳು ಆಧಾರ ರಹಿತ, ಅದರಲ್ಲಿ ಯಾವುದೇ ಸತ್ಯವಿಲ್ಲ. ಬಳ್ಳಾರಿಯಲ್ಲಿ ನಾನು ಸಹಾಯಕ ಆಯುಕ್ತನಾಗಿದ್ದಾಗ ಅವರ ಅಪರಾಧಗಳನ್ನ ಬಹಿರಂಗಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ನನ್ನ ಕೆಲಸದ ಭಾಗವಾಗಿ ನಾನು ಇದನ್ನು ಮಾಡಿದ್ದೇನೆ. ಬಹುಶಃ ಆ ಕಾರಣಗಳಿಂದ ನನ್ನ ಮೇಲೆ ಈ ಆರೋಪ ಮಾಡಿರಬಹುದು. ಇದನ್ನ ಹೊರತುಪಡಿಸಿ ಇದು ಬಿಜೆಪಿಯ ಹತಾಶ ರಾಜಕೀಯವಾಗಿರಬಹುದು ಎಂದು ತಿರುಗೇಟು ನೀಡಿದ್ದಾರೆ.
ಇತ್ತಿಚೇಗೆ ಕರ್ನಾಟಕದಲ್ಲಿ ಹೊರ ಬಂದ 'ಮತಗಳ್ಳತನ' ಪ್ರಕರಣದ ಗಮನವನ್ನ ಬೇರೆಡೆ ಸೆಳೆಯುವ ಪ್ರಯತ್ನಕ್ಕಾಗಿ ರೆಡ್ಡಿ ಆರೋಪ ಮಾಡಿರಬಹುದು. ವದಂತಿಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಿಕ ದೂರು ನೀಡಿದ್ದ ಪ್ರಕರಣ ಸಂಬಂಧ ಮಂಗಳವಾರ ಮಾತನಾಡಿದ್ದ ಜನಾರ್ದನ ರೆಡ್ಡಿ, ಧರ್ಮಸ್ಥಳ ದೇವಸ್ಥಾನದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಅವರ ಕೈವಾಡವಿದೆ. ಈ ಸಂಪೂರ್ಣ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಸಸಿಕಾಂತ್ ಸೆಂಥಿಲ್ ಎಂದು ಗಂಭೀರ ಆರೋಪ ಮಾಡಿದ್ದರು.
ದಕ್ಷಿಣ ಕನ್ನಡದ ಇಬ್ಬರು ವ್ಯಕ್ತಿಗಳೊಂದಿಗೆ ಸಸಿಕಾಂತ್ ಸೆಂಥಿಲ್ ಸೇರಿ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕಾರ್ಯಸೂಚಿಗಳನ್ನು ಸಿದ್ಧಪಡಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಈ ಪ್ರಕರಣದಲ್ಲಿ ಆಸಕ್ತಿ ಇರಲಿಲ್ಲವಾದರೂ, ಹೈಕಮಾಂಡ್‌ನ ಒತ್ತಡ ತಂದು ಎಸ್‌ಐಟಿ ತನಿಖೆ ಮಾಡಿಸಲಾಗಿದೆ. ಎಡಪಂಥೀಯ ನಿಲುವುಗಳನ್ನು ಹೊಂದಿರುವ ಸಸಿಕಾಂತ್ ಸೆಂಥಿಲ್ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಜನಾರ್ದನ ರೆಡ್ಡಿ ಆಗ್ರಹಿಸಿದ್ದರು.