
ಡಿಜೆ ಬಳಕೆಗೆ ಸಂಬಂಧಿಸಿ ಕಾನೂನು ಸ್ಪಷ್ಟ; ಕಾರ್ಯಕ್ರಮಗಳಲ್ಲಿ ಡಿಜೆಗೆ ಅವಕಾಶ ನೀಡಲಾಗದು: ಸುಧೀರ್ ಕುಮಾರ್ ರೆಡ್ಡಿ
ಮಂಗಳೂರು: ಡಿಜೆ ಬಳಕೆಗೆ ಸಂಬಂಧಿಸಿ ಕಾನೂನು ಸ್ಪಷ್ಟವಾಗಿದೆ. ಹಾಗಾಗಿ ಕಾರ್ಯಕ್ರಮಗಳಲ್ಲಿ ಡಿಜೆಗೆ ಅವಕಾಶ ನೀಡಲಾಗದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸೇರುವ ಜನಸಂಖ್ಯೆ, ಸ್ಥಳ ಹಾಗೂ ಕಾರ್ಯಕ್ರಮದ ಅಗತ್ಯಕ್ಕೆ ಅನುಗುಣವಾಗಿ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಬೇಕೆಂಬ ದ.ಕ. ಜಿಲ್ಲಾ ಧ್ವನಿವರ್ಧಕ ಹಾಗೂ ದೀಪಾಲಂಕಾರ ಮಾಲಕರ ಸಂಘದ ಬೇಡಿಕೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಬೇಡಿಕೆಯಂತೆ ಧ್ವನಿವರ್ದಕಗಳಿಗೆ ಅವಕಾಶ ನೀಡದಿದ್ದರೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕಗಳನ್ನು ನೀಡುವುದಿಲ್ಲ ಎಂದು ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘ ಬುಧವಾರ ಪತ್ರಿಕಾಗೋಷ್ಟಿಯ ಮೂಲಕ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ, ಬಹಿಷ್ಕಾರ ಸೇರಿದಂತೆ ಯಾವುದೇ ರೀತಿಯ ನಿರ್ಧಾರಕ್ಕೆ ಅವರು ಮುಕ್ತರಾಗಿರುತ್ತಾರೆ. ಅದು ಅವರ ಪರಿಕರಗಳು ಮತ್ತು ಅವರ ನಿರ್ಧಾರ ಎಂದು ಹೇಳಿದ್ದಾರೆ.
ಸಾರ್ವಜನಿಕರು, ಹಿರಿಯ ನಾಗರಿಕರು, ರೋಇಗಳು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಸಂಭ್ರಮಾಚರಣೆಯನ್ನು ನಡೆಸಲು ಪೂರಕ ವ್ಯವಸ್ಥೆಗಳನ್ನು ಮಾಡಲಾಗುವುದು. ಇದಕ್ಕಾಗಿ ಗಣೇಶೋತ್ಸವ ಸಂಘಟಕರ ಜತೆ ಗುರುವಾರ (ಇಂದು)ಸಂಜೆ ಡಿಸಿಪಿ, ಹೆಚ್ಚುವರಿ ಎಸ್ಪಿ ಮತ್ತು ಎಸಿಪಿಗಳ ಸಭೆಯನ್ನು ಕರೆಯಲಾಗಿದ್ದು, ಅಗತ್ಯ ನಿಯಮಗಳನ್ನು ಅಂತಿಮಗೊಳಿಸಿ ಸಭೆಯಲ್ಲಿ ನೀಡಲಾಗುವುದು. ಈಗಾಗಲೇ ನಿಯಮಗಳಿವೆ. ಸಮರ್ಥನೀಯ ಕಾರಣಗಳಡಿ ಕೆಲವೊಂದು ನಿಯಮಗಳಿಗೆ ಕೆಲ ವಿನಾಯಿತಿ ನೀಡಬಹುದು. ಆದರೆ ವಿನಾಯಿತಿ ನಿಯಮವಾಗುವುದಿಲ್ಲ ಎಂದು ಸುಧೀರ್ ರೆಡ್ಡಿ ತಿಳಿಸಿದ್ದಾರೆ.