ಕಾಪು ಕೊಪ್ಪಲಂಗಡಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಭವ್ಯ ‘ಇನಾಸನ್ ಆಡಿಟೋರಿಯಂ’ ಲೋಕಾರ್ಪಣೆ

ಉಡುಪಿ: ಕಾಪು ಕೊಪ್ಪಲಂಗಡಿಯ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ ನೂತನವಾಗಿ ನಿರ್ಮಾಣಗೊಂಡಿರುವ ಸರ್ವಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಭವ್ಯ ಸಭಾಂಗಣ ‘ಇನಾಸನ್ ಆಡಿಟೋರಿಯಂ’ ರವಿವಾರ ಶುಭಾರಂಭಗೊಂಡಿತು.
ನೂತನ ಆಡಿಟೋರಿಯಂ ಉದ್ಘಾಟಿಸಿದ ಮುಹಮ್ಮದ್ ಅಸ್ಲಂ ಖಾಜಿ
ನೂತನ ಆಡಿಟೋರಿಯಂನ್ನು ಮಂಗಳೂರು- ಉಡುಪಿ ಅಬ್ಕೋ ಸ್ಟೀಲ್‌ನ ಆಡಳಿತ ನಿರ್ದೇಶಕ ಮುಹಮ್ಮದ್ ಅಸ್ಲಂ ಖಾಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈ ಸಭಾಭವನ ಎಲ್ಲ ಧರ್ಮ, ಜಾತಿಯವರ ಅವಶ್ಯಕತೆ ಗಳನ್ನು ಪೂರೈಸುತ್ತದೆ. ಎಲ್ಲರ ಸಹಕಾರದೊಂದಿಗೆ ಈ ಸಭಾಭವನ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಶುಭಹಾರೈಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸಾಮರಸ್ಯದ ಕಾಪು- ಸಮೃದ್ಧ ಕಾಪು ನಿರ್ಮಿಸುವಲ್ಲಿ ಇನಾಸನ್ ಸಭಾಭವನ ನೆರವಾಗಲಿ. ಶಾಂತಿ ಸೌಹಾರ್ದತೆ, ಸಮೃದ್ಧತೆಯ ಜೀವನಕ್ಕೆ ನಾಂದಿಯಾಗಲಿ. ಮನಸ್ಸು ಮನಸ್ಸು ಗಳನ್ನು ಬೆಸೆಯಲು ಕಾರ್ಯ ಆಗಲಿ ಎಂದು ಶುಭಹಾರೈಸಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉದ್ಯಾವರ ಹಲಿಮಾ ಸಬ್ಜು ಆಡಿಟೋರಿಯಂನ ಚೇಯರ್‌ಮೆನ್ ಅಬ್ದುಲ್ ಜಲೀಲ್ ಸಾಹೇಬ್ ಶುಭಹಾರೈಸಿದರು. ಮೂಳೂರು ಅಲ್ ಇಹ್ಸಾನ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ವ್ಯವಸ್ಥಾಪಕ ಮೌಲಾನ ಯು.ಕೆ.ಮುಸ್ತಫಾ ಸಅದಿ ದುವಾ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ, ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ ಮಾತನಾಡಿದರು. ಅಧ್ಯಕ್ಷತೆಯನ್ನು ಇನಾಸನ್ ಗ್ರೂಪ್‌ನ ಅಧ್ಯಕ್ಷ ಮೊಹಮ್ಮದ್ ಸಾದಿಕ್ ದೀನಾರ್ ವಹಿಸಿದ್ದರು.
ವೇದಿಕೆಯಲ್ಲಿ ಡಾ.ಶೇಖ್ ವಾಹೀದ್, ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ಸಮಾಜ ಸೇವಕ ಶಭೀ ಅಹ್ಮದ್ ಖಾಝಿ, ಉದ್ಯಮಿಗಳಾದ ಅಬ್ದುಲ್ ರೆಹಮಾನ್, ಶಾಬು ಸಾಹೇಬ್, ಅಬ್ದುಲ್ ಕೈಯುಮ್ ಸಾಹೇಬ್, ಮಕ್ಬುಲ್ ಅಹ್ಮದ್, ಕಾಪು ಮಕರ ಕನ್‌ಸ್ಟ್ರಕ್ಷನ್ಸ್‌ನ ಸುಧಾಕರ ಶೆಟ್ಟಿ ಮಲ್ಲಾರು, ಇಂಜಿನಿಯರ್ ಸುಲೇಮಾನ್, ಕಾಪು ದಿವಾಕರ ಶೆಟ್ಟಿ, ಝಾಕೀರ್ ಮೊದಿನ್ ಮೊದಲಾದವರು ಉಪಸ್ಥಿತರಿದ್ದರು.
ಇನಾಸನ್ ಗ್ರೂಪ್‌ನ ಪ್ರಧಾನ ಕಾರ್ಯದರ್ಶಿ ನಝೀರ್ ಅಹ್ಮದ್ ಸ್ವಾಗತಿಸಿದರು. ಮುಹಮ್ಮದ್ ಶರೀಫ್ ಕಾರ್ಯಕ್ರಮ ನಿರೂಪಿಸಿದರು. ಆರ್ಕಿಟೆಕ್ಚರ್ ಆದಿಲ್ ವಂದಿಸಿದರು. ಅಬ್ದುಲ್ ಖಲೀಲ್ ತಂಡದಿಂದ ನಾಥ್ ಕಾರ್ಯಕ್ರಮ ನಡೆಯಿತು.
ಆಡಿಟೋರಿಯಂ'ನ ವಿಶೇಷತೆಗಳು....
ಸಂಪೂರ್ಣ ಹವಾನಿಯಂತ್ರಿತ ಈ ಸಭಾಂಗಣದಲ್ಲಿ 5000ಕ್ಕೂ ಅಧಿಕ ಮಂದಿ ಸೇರಬಹುದಾಗಿದೆ. ಮುಖ್ಯ ಹಾಲ್‌ನಲ್ಲಿ 1,500 ಮಂದಿಗೆ ಕುಳಿತು ಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದ್ದು, ಮಹಿಳೆಯರಿಗಾಗಿ ಪ್ರತ್ಯೇಕ ಬಾಲ್ಕನಿಯಲ್ಲಿ 1,500 ಆಸನ ವ್ಯವಸ್ಥೆ ಮಾಡಲಾಗಿದೆ. 4,000 ಚದರ ಅಡಿ ವಿಸ್ತ್ರೀರ್ಣದ ಭವ್ಯವಾದ ಪ್ರವೇಶ ದ್ವಾರ, 300 ಆಸನ ಸಾಮರ್ಥ್ಯದ ಮಿನಿ ಹಾಲ್, ಕಾನ್ಫರೆನ್ಸ್ ರೂಂಗಳು ಕೂಡ ಇವೆ.
ಜನರ ಅವಶ್ಯಕತೆಗೆ ತಕ್ಕಂತೆ ಆಡಿಟೋರಿಯಂ ನಿರ್ಮಾಣ....
ಒಟ್ಟು 30,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಎರಡು ಭೋಜನ ಭವನಗಳು, ಪೂರ್ಣಸಜ್ಜಿತ ಅಡುಗೆ ಮನೆಗಳು, ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ನಮಾಜ್ ಕೊಠಡಿಗಳು, ಹೈ-ಕ್ಯಾಪಾಸಿಟಿ ಲಿಫ್ಟ್‌ಗಳು ಹಾಗೂ 250 ವಾಹನಗಳಿಗೆ ಅನುಕೂಲವಾಗುವ ಪಾರ್ಕಿಂಗ್ ವ್ಯವಸ್ಥೆಗಳನ್ನು ಈ ಸಭಾಂಗಣ ಒಳಗೊಂಡಿದೆ. ಎಲ್ಲ ಧರ್ಮ, ಜಾತಿ ಮತ್ತು ಪಂಗಡಗಳ ಜನರ ಅವಶ್ಯಕತೆಗೆ ತಕ್ಕಂತೆ ಈ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ.







