ಎರ್ಮಾಳ್ ಮೀಲಾದ್ ಕಾರ್ಯಕ್ರಮದಲ್ಲಿ ಆಪತ್ಬಾಂದವ ಜಲ್ಲಾಲುದ್ದಿನ್, ಹಮೀದ್ NH, KM ಸಿರಾಜ್ ರಿಗೆ ಸನ್ಮಾನ
ಉಚ್ಚಿಲ: ಅಲ್ ಮದ್ರಸ ದೀನಿಯತ್ ಮಸೀದಿ ಮತ್ತು ಅಲ್ ಮದೀನಾ ಯಂಗ್ ಮೆನ್ಸ್ ಅಸೋಸಿಯೇಷನ್ ಎರ್ಮಾಳ್ ಬಡ ಇದರ ವತಿಯಿಂದ ರವಿವಾರ ನಡೆದ ಮೀಲಾದ್ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಜಲ್ಲಾಲುದ್ದಿನ್ ಜಲ್ಲು, SDPI ಉಚ್ಚಿಲ-ಮೂಳೂರು ಆಂಬುಲೆನ್ಸ್ ಚಾಲಕರಾದ ಹಮೀದ್ NH ಹಾಗು KM ಸಿರಾಜ್ ಅವರ ಸಮಾಜ ಸೇವೆ ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಉಚ್ಚಿಲ, ಪಡುಬಿದ್ರೆ, ಕಾಪು ಸೇರಿದಂತೆ ಎಲ್ಲೇ ಅಪಘಾತ, ಇನ್ನಿತರ ಅನಾಹುತಗಳು ಸಂಭವಿಸಿದ ತಕ್ಷಣವೇ ತಮ್ಮ ಜೀವದ ಹಂಗುತೊರೆದು ಜನರ ಜೀವ ರಕ್ಷಣೆಗೆ ಮುಂದಾಗುತ್ತಿರುವ ಈ ಮೂವರು, ಹಗಲು ರಾತ್ರಿ ಎನ್ನದೆ ಜನರ ರಕ್ಷಣೆಗೆ ಸದಾಬದ್ಧರಾಗಿರುವುದು ಇವರ ಸಾಮಾಜಿಕ ಕಳಕಳಿ, ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ.
ಧರ್ಮ, ಜಾತಿಗಳ ಮಧ್ಯೆ ಕಂದಕ ಸೃಷ್ಟಿಯಾಗಿರುವ ಇಂದಿನ ಪ್ರಸಕ್ತ ಸನ್ನಿವೇಶದಲ್ಲಿ ಅದಾವುದನ್ನೂ ಲೆಕ್ಕಿಸದೆ ತಮ್ಮ ಸುತ್ತಮುತ್ತ ನಡೆಯುವ ಅಪಘಾತ, ಅನಾಹುತಗಳಿಗೆ ತತಕ್ಷಣ ಸ್ಪಂದಿಸುವ ಮೂಲಕ ಜನರ ಅಮೂಲ್ಯ ಜೀವ ರಕ್ಷಣೆಗೆ ಸದಾ ಸಿದ್ಧರಾಗಿರುವ ಮೂಲಕ ಸೌಹಾರ್ದದ ಕೊಂಡಿಕೂಡ ಆಗಿದ್ದಾರೆ. ಇವರ ಈ ಕಳಕಳಿಗೆ ಈ ಭಾಗದ ಸುತ್ತಮುತ್ತಲಿನ ನಾಗರಿಕರು ಮೆಚ್ಚುಗೆ, ಗೌರವವನ್ನು ಸೂಚಿಸುತ್ತಲೇ ಇದ್ದಾರೆ.
ಸಾಮಾಜಿಕ ಜವಾಬ್ದಾರಿ, ತುರ್ತು ಸಂದರ್ಭದಲ್ಲಿ ತ್ವರಿತ ಪ್ರತಿಕ್ರಿಯೆ, ಸಹಾಯ ಮನೋಭಾವನೆ ಮತ್ತು ಮನುಷ್ಯತ್ವ. ಈ ಎಲ್ಲ ಅಂಶಗಳನ್ನು ಒಳಗೊಂಡು ಕಾರ್ಯನಿರತರಾಗುವ ಈ ಮೂವರ ಸಾಧನೆ, ಸಾಮಾಜಿಕ ಬದ್ಧತೆಯನ್ನು ಗುರುತಿಸಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಎರ್ಮಾಳು ಮಸೀದಿಯ ಅಧ್ಯಕ್ಷ ಮೊಹಮ್ಮದ್ ಶರೀಫ್ ಪಡು, ಕಾರ್ಯದರ್ಶಿ ರಝಾಕ್ ಬಗ್ಗತೋಟ, ಎರ್ಮಾಳ್ ಬಡಾ ಅಲ್ ಮದ್ರಸ ದೀನಿಯತ್ ಅಧ್ಯಕ್ಷ ಸುಲೈಮಾನ್ ಸುರಭಿ, ಕಾಪು ತಾಲೂಕು ಪಂಚಾಯತ್ ಉಪಾಧ್ಯಕ್ಷ ಯು.ಸಿ.ಶೇಖಬ್ಬ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
